ಪಾಕಿಸ್ತಾನ | ಚೆಕ್ ಪೋಸ್ಟ್ ಮೇಲೆ ದಾಳಿ; 3 ಪೊಲೀಸರು ಮೃತ್ಯು

ಸಾಂದರ್ಭಿಕ ಚಿತ್ರ
ಪೇಷಾವರ: ಗುರುವಾರ ಬೆಳಿಗ್ಗೆ ವಾಯವ್ಯ ಪಾಕಿಸ್ತಾನದ ಪ್ರಕ್ಷುಬ್ಧ ಖೈಬರ್ಪಖ್ತೂಂಕ್ವಾ ಪ್ರಾಂತದ ಪೊಲೀಸ್ ಚೆಕ್ಪೋಸ್ಟ್ ಮೇಲೆ ಭಾರೀ ಶಸ್ತ್ರಸಜ್ಜಿತ ಉಗ್ರರು ನಡೆಸಿದ ದಾಳಿಯಲ್ಲಿ ಕನಿಷ್ಠ 3 ಪೊಲೀಸರು ಸಾವನ್ನಪ್ಪಿದ್ದು ಇತರ 6 ಮಂದಿ ಗಾಯಗೊಂಡಿರುವುದಾಗಿ ಪೊಲೀಸ್ ಮೂಲಗಳು ಹೇಳಿವೆ.
ಅಫ್ಘಾನಿಸ್ತಾನದ ಗಡಿಯ ಸನಿಹದಲ್ಲಿರುವ ಕಾರಕ್ ಜಿಲ್ಲೆಯ ಬಹಾದುರ್ ಖೇಲ್ ಚೆಕ್ಪೋಸ್ಟ್ನ ಮೇಲೆ ದಾಳಿಕೋರರು ನಾಲ್ಕೂ ದಿಕ್ಕಿನಿಂದ ಗುಂಡಿನ ಸುರಿಮಳೆಗರೆದಿದ್ದಾರೆ. ಚೆಕ್ಪೋಸ್ಟ್ ಅನ್ನು ವಶಪಡಿಸಿಕೊಳ್ಳುವ ಉಗ್ರರ ಪ್ರಯತ್ನವನ್ನು ಪೊಲೀಸರು ವಿಫಲಗೊಳಿಸಿದ್ದಾರೆ. ಸುಮಾರು 2 ಗಂಟೆ ನಡೆದ ಗುಂಡಿನ ಚಕಮಕಿ ಬಳಿಕ ಉಗ್ರರು ಪರಾರಿಯಾಗಿದ್ದು ಮೂವರು ಪೊಲೀಸರು ಮೃತಪಟ್ಟಿದ್ದಾರೆ. ಗಾಯಗೊಂಡ 6 ಪೊಲೀಸರಲ್ಲಿ ಮೂವರ ಸ್ಥಿತಿ ಗಂಭೀರವಾಗಿದೆ. ಯಾವುದೇ ಗುಂಪು ದಾಳಿಯ ಹೊಣೆ ವಹಿಸಿಲ್ಲ ಎಂದು ಹೇಳಿಕೆ ತಿಳಿಸಿದೆ. ಘಟನೆಯ ಬಖಿಕ ಖೈಬರ್ ಪಖ್ತೂಂಕ್ವ ಪ್ರಾಂತದಾದ್ಯಂತ ಭದ್ರತೆ ಕ್ರಮಗಳನ್ನು ಹೆಚ್ಚಿಸಲಾಗಿದೆ ಎಂದು ಪ್ರಾಂತೀಯ ಸರಕಾರದ ಮೂಲಗಳು ಹೇಳಿವೆ.
Next Story