ಒಬ್ಬರು ವಲಸಿಗರ ವಿರುದ್ಧವಿದ್ದರೆ, ಮತ್ತೊಬ್ಬರು ಮಕ್ಕಳನ್ನು ಹತ್ಯೆಗೈಯ್ಯುತ್ತಾರೆ: ಟ್ರಂಪ್ ಮತ್ತು ಕಮಲಾ ಹ್ಯಾರಿಸ್ ಬಗ್ಗೆ ಪೋಪ್ ಫ್ರಾನ್ಸಿಸ್ ಕಟು ನುಡಿ
ಪೋಪ್ ಫ್ರಾನ್ಸಿಸ್ | PC : NDTV
ರೋಮ್: ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಹಣಾಹಣಿ ನಡೆಸುತ್ತಿರುವ ಡೊನಾಲ್ಡ್ ಟ್ರಂಪ್ ವಲಸಿಗರ ವಿರುದ್ಧವಿದ್ದರೆ, ಕಮಲಾ ಹ್ಯಾರಿಸ್ ಗರ್ಭಪಾತದ ಹಕ್ಕಿನ ಪರವಿದ್ದಾರೆ. ನಾನು ಇಬ್ಬರನ್ನೂ ಜೀವ ವಿರೋಧಿಗಳೆಂದೇ ಪರಿಗಣಿಸುತ್ತೇನೆ ಎಂದು ಶುಕ್ರವಾರ ಪೋಪ್ ಫ್ರಾನ್ಸಿಸ್ ಕಟುವಾಗಿ ಪ್ರತಿಕ್ರಿಯಿಸಿದ್ದಾರೆ.
ತಮ್ಮ 12 ದಿನಗಳ ಏಶ್ಯ ಪ್ರವಾಸ ಮುಗಿಸಿ ರೋಮ್ ಗೆ ವಿಮಾನದಲ್ಲಿ ಮರಳುವ ಮಾರ್ಗಮಧ್ಯೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, “ಒಬ್ಬರು ವಲಸಿಗರನ್ನು ತಿರಸ್ಕರಿಸುತ್ತಾರೆ. ಮತ್ತೊಬ್ಬರು ಮಕ್ಕಳನ್ನು ಹತ್ಯೆಗೈಯ್ಯುತ್ತಾರೆ. ಇಬ್ಬರೂ ಜೀವ ವಿರೋಧಿಗಳೇ” ಎಂದು ತೀಕ್ಷ್ಣ ವಾಗ್ದಾಳಿ ನಡೆಸಿದ್ದಾರೆ.
“ನಾನು ಅಮೆರಿಕ ಪ್ರಜೆಯಲ್ಲ ಹಾಗೂ ನಾನಲ್ಲಿ ಮತ ಚಲಾಯಿಸುವುದಿಲ್ಲ. ಆದರೆ, ಇಬ್ಬರೂ ವಲಸಿಗರನ್ನು ಹೊರದೂಡುತ್ತಿದ್ದಾರೆ. ಅವರು ವಲಸಿಗರ ಸಾಮರ್ಥ್ಯಕ್ಕೆ ತಕ್ಕಂತೆ ಕೆಲಸ ನೀಡುತ್ತಿಲ್ಲ ಹಾಗೂ ಅವರನ್ನು ಸ್ವಾಗತಿಸುವುದು ಪಾಪ ಎಂದು ಭಾವಿಸಿದ್ದಾರೆ. ಇದು ನಿಜಕ್ಕೂ ಗಂಭೀರ ಸಂಗತಿ” ಎಂದು ಅವರು ವಿಷಾದ ವ್ಯಕ್ತಪಡಿಸಿದ್ದಾರೆ.
“ಯಾರಾದರೂ ಕಡಿಮೆ ಅಪಾಯಕಾರಿಗಳನ್ನು ಆಯ್ಕೆ ಮಾಡಿಕೊಳ್ಳಬೇಕಾಗುತ್ತದೆ. ಆ ಮಹಿಳೆ ಅಥವಾ ಆ ಸಂಭಾವಿತ ಪುರುಷನೊ ಎಂಬುದು ನನಗೆ ತಿಳಿದಿಲ್ಲ. ಆದರೆ, ಎಲ್ಲರೂ ಈ ಕುರಿತು ಆಲೋಚಿಸಬೇಕು ಹಾಗೂ ತಮ್ಮ ಆತ್ಮಸಾಕ್ಷಿಗನುಗುಣವಾಗಿ ನಿರ್ಧಾರ ಕೈಗೊಳ್ಳಬೇಕು” ಎಂದು ಪೋಪ್ ಫ್ರಾನ್ಸಿಸ್ ಕರೆ ನೀಡಿದ್ದಾರೆ.
ನವೆಂಬರ್ ನಲ್ಲಿ ನಡೆಯಲಿರುವ ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಗೆದ್ದು, ಶ್ವೇತ ಭವನಕ್ಕೆ ಮರಳಲು ಹವಣಿಸುತ್ತಿರುವ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಈಗಾಗಲೇ ಅಕ್ರಮ ವಲಸಿಗರನ್ನು ಸುತ್ತುವರಿಯಲಾಗುವುದು ಹಾಗೂ ಅವರನ್ನು ದೇಶದಿಂದ ಗಡೀಪಾರು ಮಾಡಲಾಗುವುದು ಎಂದು ಚುನಾವಣಾ ಭರವಸೆ ನೀಡಿದ್ದಾರೆ.
ಇದಲ್ಲದೆ, 1973ರಲ್ಲಿ ರೋ ವರ್ಸಸ್ ವೇಡ್ ಪ್ರಕರಣದಲ್ಲಿ ಗರ್ಭಪಾತವು ಮಹಿಳೆಯ ರಾಷ್ಟ್ರೀಯ ಹಕ್ಕು ಎಂಬ ತೀರ್ಪನ್ನು ವಜಾಗೊಳಿಸಿದ್ದ 2022ರ ಅಮೆರಿಕ ಸುಪ್ರೀಂ ಕೋರ್ಟ್ ತೀರ್ಪಿನ ಜಾರಿಗೂ ಟ್ರಂಪ್ ಹಾದಿ ಮಾಡಿಕೊಟ್ಟಿದ್ದಾರೆ. ಆದರೆ, ಗರ್ಭಪಾತದ ಹಕ್ಕನ್ನು ಮರುಸ್ಥಾಪಿಸುವುದಾಗಿ ಕಮಲಾ ಹ್ಯಾರಿಸ್ ಶಪಥ ಮಾಡಿದ್ದಾರೆ.