ತೈವಾನ್ ಮೇಲೆ ರಶ್ಯ, ಚೀನಾದಿಂದ ಆಕ್ರಮಣದ ಸಾಧ್ಯತೆ: ಅಮೆರಿಕ
ಸಾಂದರ್ಭಿಕ ಚಿತ್ರ | PC : NDTV
ವಾಷಿಂಗ್ಟನ್: ತೈವಾನ್ ಮೇಲೆ ಸಂಭಾವ್ಯ ಆಕ್ರಮಣ ಸೇರಿದಂತೆ ಮಿಲಿಟರಿ ವಿಷಯಗಳಲ್ಲಿ ರಶ್ಯ ಮತ್ತು ಚೀನಾ ಇನ್ನಷ್ಟು ನಿಕಟವಾಗಿ ಕಾರ್ಯ ನಿರ್ವಹಿಸುತ್ತಿವೆ ಎಂದು ಅಮೆರಿಕದ ಗುಪ್ತಚರ ಅಧಿಕಾರಿಗಳು ಹೇಳಿದ್ದಾರೆ.
ಇದೇ ಪ್ರಥಮ ಬಾರಿಗೆ ತೈವಾನ್ಗೆ ಸಂಬಂಧಿಸಿದ ವಿಷಯದಲ್ಲಿ ರಶ್ಯ ಮತ್ತು ಚೀನಾ ಜತೆಗೂಡಿ ಕಾರ್ಯನಿರ್ವಹಿಸುವುದನ್ನು ಕಾಣಬಹುದು ಮತ್ತು ಈ ಕ್ಷೇತ್ರದಲ್ಲಿ ಖಂಡಿತಾ ಚೀನಾವು ರಶ್ಯದ ಜತೆಗೂಡಿ ಮುಂದುವರಿಯಲು ಬಯಸಿದೆ ಎಂದು ಅಮೆರಿಕದ ರಾಷ್ಟ್ರೀಯ ಗುಪ್ತಚರ ವಿಭಾಗದ ನಿರ್ದೇಶಕ ಅವ್ರಿಲ್ ಹೇಯ್ನ್ಸ್ ಸಂಸತ್ನಲ್ಲಿ ಹೇಳಿದ್ದಾರೆ.
ತೈವಾನ್ ವಿಷಯದಲ್ಲಿ ಚೀನಾ-ರಶ್ಯದ ಸಂಭಾವ್ಯ ಜಂಟಿ ಕಾರ್ಯಾಚರಣೆ ಹಾಗೂ ಇಂತಹ ಸಾಧ್ಯತೆಯ ಸಂದರ್ಭದಲ್ಲಿ ಅಮೆರಿಕ ರಕ್ಷಣಾ ಪಡೆಯ ಯೋಜನೆಗಳ ಬಗ್ಗೆ ಸಂಸದ್ ಸದಸ್ಯ ಮೈಕ್ ರೌಂಡ್ಸ್ ಕೇಳಿದ ಪ್ರಶ್ನೆಗೆ ಉತ್ತರಿಸಿದ ಹೇಯ್ನ್ಸ್ `ಖಂಡಿತವಾಗಿಯೂ ಈ ಸಾಧ್ಯತೆಯಿದೆ. ಇದು ಎಷ್ಟು ಸಾಧ್ಯ ಎಂಬ ಪ್ರಶ್ನೆಗೆ `ಸನ್ನಿವೇಶವನ್ನು ಅವಲಂಬಿಸಿ ಭಿನ್ನವಾಗಿರುತ್ತದೆ' ಎಂದು ಉತ್ತರಿಸಲು ಬಯಸುತ್ತೇನೆ' ಎಂದರು. ಗುಪ್ತಚರ ಅವಲೋಕನದಲ್ಲಿ ರಶ್ಯ ಮತ್ತು ಚೀನಾದ ನಡುವೆ ಸಮಾಜದ ಪ್ರತಿಯೊಂದು ಕ್ಷೇತ್ರದಾದ್ಯಂತ (ರಾಜಕೀಯ, ಆರ್ಥಿಕ, ಮಿಲಿಟರಿ, ತಾಂತ್ರಿಕ ಇತ್ಯಾದಿ) ಮಿತಿಯಿಲ್ಲದ ಸಹಭಾಗಿತ್ವ ಹೆಚ್ಚುತ್ತಿರುವುದನ್ನು ಗಮನಿಸಲಾಗಿದೆ ಎಂದವರು ಹೇಳಿದ್ದಾರೆ.