ಬ್ರೆಝಿಲ್: ಚಂಡಮಾರುತದ ಅಬ್ಬರ ಕನಿಷ್ಠ 12 ಮಂದಿ ಸಾವು
ಸಾಂದರ್ಭಿಕ ಚಿತ್ರ (PTI)
ಬ್ರಸೀಲಿಯಾ: ಆಗ್ನೇಯ ಬ್ರೆಝಿಲ್ಗೆ ಅಪ್ಪಳಿಸಿದ ಪ್ರಬಲ ಚಂಡಮಾರುತದಿಂದ ಕನಿಷ್ಠ 12 ಮಂದಿ ಮೃತಪಟ್ಟಿದ್ದು ಹಲವರು ಗಾಯಗೊಂಡಿದ್ದಾರೆ. ಸಾವಿರಾರು ಮಂದಿಯನ್ನು ಸುರಕ್ಷಿತ ಪ್ರದೇಶಕ್ಕೆ ಸ್ಥಳಾಂತರಿಸಿರುವುದಾಗಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ರಿಯೊ ಡಿ ಜನೈರೊದ ಪರ್ವತ ಪ್ರದೇಶಗಳ ಸುತ್ತಮುತ್ತ ಚಂಡಮಾರುತದಿಂದ ವ್ಯಾಪಕ ನಾಶ-ನಷ್ಟವಾಗಿದ್ದು ಶೋಧ ಮತ್ತು ರಕ್ಷಣಾ ಕಾರ್ಯ ತಂಡವನ್ನು ನಿಯೋಜಿಸಲಾಗಿದೆ. ರಿಯೊ ಡಿ ಜನೈರೊದ ಪೆಟ್ರೊಪೊಲಿಸ್ ನಗರದಲ್ಲಿ ಮನೆಯೊಂದು ಕುಸಿದುಬಿದ್ದು ಮನೆಯಲ್ಲಿದ್ದ 4 ಮಂದಿ ಸಾವನ್ನಪ್ಪಿದ್ದಾರೆ. 16 ಗಂಟೆ ಮನೆಯ ಅವಶೇಷಗಳಡಿ ಸಿಲುಕಿದ್ದ ಬಾಲಕಿಯನ್ನು ಶನಿವಾರ ರಕ್ಷಿಸಲಾಗಿದ್ದು ಆಸ್ಪತ್ರೆಯಲ್ಲಿ ಚೇತರಿಸಿಕೊಳ್ಳುತ್ತಿದ್ದಾಳೆ. ರಿಯೊ ಡಿ ಜನೈರೊ ರಾಜ್ಯದಲ್ಲೇ ಕನಿಷ್ಠ 8 ಮಂದಿ ಮೃತಪಟ್ಟಿದ್ದರೆ ನೆರೆಯ ಎಸ್ಪಿರಿಟೊ ಸ್ಯಾಂಟೊ ರಾಜ್ಯದಲ್ಲಿ ಕನಿಷ್ಠ 4 ಮಂದಿ ಸಾವನ್ನಪ್ಪಿದ್ದು 7 ಮಂದಿ ನಾಪತ್ತೆಯಾಗಿರುವುದು ದೃಢಪಟ್ಟಿದೆ. ತೀವ್ರ ವೇಗದ ಸುಂಟರಗಾಳಿ ಬೀಸುತ್ತಿರುವುದು ರಕ್ಷಣಾ ಕಾರ್ಯಾಚರಣೆಗೆ ಅಡ್ಡಿಯಾಗಿದೆ. ಹಲವು ಮನೆಗಳಿಗೆ ಹಾನಿಯಾಗಿದ್ದು ಸಾವಿರಾರು ಮಂದಿಯನ್ನು ಸುರಕ್ಷಿತ ಪ್ರದೇಶಕ್ಕೆ ಸ್ಥಳಾಂತರಿಸಲಾಗಿದೆ. ಎಸ್ಪಿರಿಟೊ ಸ್ಯಾಂಟೊ ನಗರದಲ್ಲಿ 4 ಮಂದಿ ಮೃತಪಟ್ಟಿದ್ದು ಇಬ್ಬರು ಮಕ್ಕಳು ತೀವ್ರ ಗಾಯಗೊಂಡಿದ್ದಾರೆ. ಸಾವೊಪಾಲೊ ರಾಜ್ಯದಲ್ಲಿ ನಿರಂತರ ಮಳೆಯಿಂದಾಗಿ ಕ್ವಿಟಂಡಿನಾ ನದಿಯ ನೀರು ಉಕ್ಕೇರಿದೆ. ಪ್ರಾಂತದ ಹಲವು ಶಾಲೆಗಳನ್ನು ತಾತ್ಕಾಲಿಕ ಆಶ್ರಯ ತಾಣಗಳಾಗಿ ಮಾರ್ಪಡಿಸಲಾಗಿದ್ದು ರಕ್ಷಣಾ ಕಾರ್ಯಾಚರಣೆಗೆ ಶ್ವಾನದಳವನ್ನು ಬಳಸಲಾಗಿದೆ ಎಂದು ರಿಯೊದ ಗವರ್ನರ್ ಕ್ಲಾಡಿಯೊ ಕ್ಯಾಸ್ಟ್ರೋ ಹೇಳಿದ್ದಾರೆ.