ರಶ್ಯ ಜತೆಗಿನ ಸಂಬಂಧದ ಬಗ್ಗೆ ಒತ್ತಡ ಕ್ರಮ ಸಹಿಸುವುದಿಲ್ಲ : ನ್ಯಾಟೋಗೆ ಚೀನಾ ಎಚ್ಚರಿಕೆ
PC : NDTV
ಬೀಜಿಂಗ್: ರಶ್ಯದ ಜತೆಗಿನ ತನ್ನ ಸಂಬಂಧಗಳ ಕುರಿತು ಪ್ರಚೋದನಕಾರಿ ಹೇಳಿಕೆ ನೀಡಬಾರದು ಎಂದು ಚೀನಾ ಗುರುವಾರ ನೇಟೊ ಒಕ್ಕೂಟಕ್ಕೆ ಎಚ್ಚರಿಕೆ ನೀಡಿದೆ.
ಉಕ್ರೇನ್ ಮೇಲೆ ರಶ್ಯ ನಡೆಸುತ್ತಿರುವ ದಾಳಿಯಲ್ಲಿ ಚೀನಾ ಪ್ರಮುಖ ಪಾತ್ರ ವಹಿಸುತ್ತಿದೆ ಎಂಬ ನೇಟೊ ಹೇಳಿಕೆಗೆ ಪ್ರತಿಕ್ರಿಯಿಸಿರುವ ಚೀನಾ `ಚೀನಾ ಬೆದರಿಕೆ ಎಂಬ ಉತ್ಪ್ರೇಕ್ಷಿತ ಹೇಳಿಕೆಯನ್ನು ಮತ್ತು ಮುಖಾಮುಖಿ ಹಾಗೂ ಪೈಪೋಟಿಯನ್ನು ಪ್ರಚೋದಿಸುವ, ಜಾಗತಿಕ ಶಾಂತಿ, ಸ್ಥಿರತೆಗೆ ಪೂರಕವಾಗಿಲ್ಲದ ಕ್ರಮಗಳಿಂದ ನೇಟೊ ದೂರವಿರಬೇಕು ಎಂದು ಆಗ್ರಹಿಸಿದೆ. ಉಕ್ರೇನ್ನಲ್ಲಿ ರಶ್ಯ ನಡೆಸುತ್ತಿರುವ ಯುದ್ಧಕ್ಕೆ ತಾನು ನೆರವಾಗುತ್ತಿಲ್ಲ. ಆದರೆ ರಶ್ಯದೊಂದಿಗಿನ ಸಂಬಂಧದ ಕುರಿತ ಟೀಕೆ ಅಥವಾ ಒತ್ತಡವನ್ನು ಸಹಿಸುವುದಿಲ್ಲʼ ಎಂದು ಚೀನಾ ಎಚ್ಚರಿಕೆ ನೀಡಿದೆ.
ಬುಧವಾರ ಅಮೆರಿಕದ ವಾಷಿಂಗ್ಟನ್ನಲ್ಲಿ ನಡೆದಿದ್ದ ಶೃಂಗಸಭೆಯಲ್ಲಿ ಅನುಮೋದಿಸಿದ್ದ ನಿರ್ಣಯದಲ್ಲಿ ನೇಟೊ ಮುಖಂಡರು ` ಉಕ್ರೇನ್ ವಿರುದ್ಧದ ರಶ್ಯದ ಯುದ್ಧದಲ್ಲಿ ಚೀನಾವು ನಿರ್ಣಾಯಕ ಶಕ್ತಿಯಾಗಿದೆ' ಎಂದು ಘೋಷಿಸಿದ್ದರು. ಚೀನಾ ಹೇಳುತ್ತಿರುವ ` ಮಿತಿಯಿಲ್ಲದ ಪಾಲುದಾರಿಕೆ ಮತ್ತು ರಶ್ಯದ ರಕ್ಷಣಾ ಕೈಗಾರಿಕೆ ನೆಲೆಗೆ ದೊಡ್ಡ ಪ್ರಮಾಣದ ಬೆಂಬಲ ತೀವ್ರ ಕಳವಳ ಮತ್ತು ಆತಂಕಕ್ಕೆ ಕಾರಣವಾಗಿದೆ ಎಂದು ನೇಟೊ ಮುಖಂಡರು ಹೇಳಿದ್ದರು.
ಉಕ್ರೇನ್ ಬಿಕ್ಕಟ್ಟಿನ ಸೃಷ್ಟಿಕರ್ತ ಚೀನಾ ಅಲ್ಲ ಎಂಬುದು ಎಲ್ಲರಿಗೂ ತಿಳಿದಿದೆ. ಉಕ್ರೇನ್ ವಿಷಯದಲ್ಲಿ ಚೀನಾದ ನಿಲುವು ಮುಕ್ತವಾಗಿದೆ ಮತ್ತು ಇದರಲ್ಲಿ ಮುಚ್ಚುಮರೆಯಿಲ್ಲ ಎಂದು ಯುರೋಪಿಯನ್ ಯೂನಿಯನ್ಗೆ ಚೀನಾದ ನಿಯೋಗದ ವಕ್ತಾರರು ಗುರುವಾರ ಪ್ರತಿಕ್ರಿಯಿಸಿದ್ದಾರೆ.
ಉಕ್ರೇನ್ ಮೇಲಿನ ರಶ್ಯದ ಆಕ್ರಮಣವನ್ನು ಖಂಡಿಸಲು ನಿರಾಕರಿಸಿರುವ ಚೀನಾ, ಬಿಕ್ಕಟ್ಟಿಗೆ ರಾಜಕೀಯ ಪರಿಹಾರ ಸೂಕ್ತ ಎಂಬ ಕರೆ ನೀಡುವ ವರದಿಯನ್ನು ಕಳೆದ ವರ್ಷ ಬಿಡುಗಡೆಗೊಳಿಸಿತ್ತು. ಚೀನಾದ ಈ ನಿಲುವು ರಶ್ಯ ಸ್ವಾಧೀನಪಡಿಸಿಕೊಂಡಿರುವ ಉಕ್ರೇನ್ ಪ್ರದೇಶದ ಮೇಲೆ ರಶ್ಯದ ನಿಯಂತ್ರಣವನ್ನು ಅಧಿಕೃತಗೊಳಿಸಲಿದೆ ಎಂದು ಅಮೆರಿಕ ಮತ್ತು ಪಾಶ್ಚಿಮಾತ್ಯ ದೇಶಗಳು ಕಳವಳ ವ್ಯಕ್ತಪಡಿಸಿವೆ. ಉಕ್ರೇನ್ ಆಕ್ರಮಣದ ನಂತರ ರಶ್ಯ ಮತ್ತು ಚೀನಾದ ನಡುವಿನ ಕಾರ್ಯತಂತ್ರದ ಪಾಲುದಾರಿಕೆ ಮತ್ತಷ್ಟು ನಿಕಟಗೊಂಡಿದೆ.
*ತಟಸ್ಥ ನಿಲುವು: ಚೀನಾ ಪ್ರತಿಪಾದನೆ
ರಶ್ಯ-ಉಕ್ರೇನ್ ಯುದ್ಧದಲ್ಲಿ ತಾನು ಯಾರ ಪರವೂ ವಹಿಸದೆ ತಟಸ್ಥನಾಗಿರುವುದಾಗಿ ಚೀನಾ ಹೇಳುತ್ತಿದೆ. ಅಮೆರಿಕ ಮತ್ತು ಪಾಶ್ಚಿಮಾತ್ಯರಂತೆ ತಾನು ಯುದ್ಧಕ್ಕೆ ಶಸ್ತ್ರಾಸ್ತ್ರ ನೆರವನ್ನೂ ಒದಗಿಸುತ್ತಿಲ್ಲ ಎಂದು ಆ ದೇಶ ಪ್ರತಿಪಾದಿಸುತ್ತಿದೆ.
ಆದರೆ ಉಕ್ರೇನ್ ಯುದ್ಧದ ಬಳಿಕ ಅಮೆರಿಕ ಮತ್ತು ಪಾಶ್ಚಿಮಾತ್ಯರ ನಿರ್ಬಂಧದ ಒತ್ತಡದಿಂದ ರಶ್ಯವನ್ನು ಪಾರು ಮಾಡುವ ಉದ್ದೇಶದಿಂದ ರಶ್ಯದ ಜತೆಗಿನ ವ್ಯಾಪಾರ ವಹಿವಾಟನ್ನು ಚೀನಾ ಹೆಚ್ಚಿಸಿದೆ ಎಂದು ಅಮೆರಿಕ ಆರೋಪಿಸಿದೆ. ಜತೆಗೆ, ರಶ್ಯದ ಮಿಲಿಟರಿ ಉತ್ಪಾದನೆಗೆ ಪೂರಕವಾದ ಅತ್ಯಗತ್ಯದ ಮೂಲಸೌಕರ್ಯಗಳನ್ನು ಚೀನಾ ಪೂರೈಸುತ್ತಿದೆ. ಇದರಲ್ಲಿ ಯಂತ್ರ ಉಪಕರಣಗಳು, ಸೆಮಿಕಂಡಕ್ಟರ್ಗಳು, ಇದರ ದ್ವಿಬಳಕೆಯ ವಸ್ತುಗಳು ರಶ್ಯದ ರಕ್ಷಣಾ ಕೈಗಾರಿಕಾ ನೆಲೆಯನ್ನು ಮರು ನಿರ್ಮಾಣ ಮಾಡಲು ನೆರವಾಗಿವೆ. ಚೀನಾದ ಈ ಕ್ರಮದಿಂದಾಗಿ ರಶ್ಯವು ನಿರ್ಬಂಧ ಮತ್ತು ರಫ್ತು ನಿಯಂತ್ರಣ ಒತ್ತಡದಿಂದ ಪಾರಾಗಿದೆ ಎಂದು ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಆಂಟನಿ ಬ್ಲಿಂಕೆನ್ ಹೇಳಿದ್ದಾರೆ.