ಸಂಪುಟದಿಂದ ಶೇಕ್ ಹಸೀನಾ ಸೊಸೆಯನ್ನು ವಜಾಗೊಳಿಸುವಂತೆ ಬ್ರಿಟನ್ ಪ್ರಧಾನಿ ಮೇಲೆ ಒತ್ತಡ
ತುಲಿಪ್ ಸಿದ್ದೀಕ್ | ಕೀರ್ ಸ್ಟಾರ್ಮರ್ PC: x.com/haveigotnews
ಲಂಡನ್: ಬಾಂಗ್ಲಾದೇಶದ ಪದಚ್ಯುತ ಪ್ರಧಾನಿ ಶೇಕ್ ಹಸೀನಾ ಅವರ ಸೊಸೆ ಹಾಗೂ ಬ್ರಿಟನ್ ನ ಲೇಬರ್ ಪಕ್ಷದ ಸಚಿವೆ ತುಲಿಪ್ ಸಿದ್ದೀಕ್ ಅವರನ್ನು ಸಂಪುಟದಿಂದ ಕೈಬಿಡುವಂತೆ ಪ್ರಧಾನಿ ಕೀರ್ ಸ್ಟಾರ್ಮರ್ ಮೇಲೆ ಬಾಂಗ್ಲಾ ಮಧ್ಯಂತರ ಸರ್ಕಾರ ಒತ್ತಡ ಹೇರಿದೆ. ಬಾಂಗ್ಲಾದಲ್ಲಿ ಹಸೀನಾ ಆಡಳಿತಾವಧಿಯಲ್ಲಿ ತುಲಿಪ್ ಹಾಗೂ ಅವರ ಕುಟುಂಬಕ್ಕೆ ಉಡುಗೊರೆಯಾಗಿ ನೀಡಿದ್ದ ಲಂಡನ್ ಆಸ್ತಿಗಳನ್ನು ಅವರು ಬಳಕೆ ಮಾಡುವುದಕ್ಕೆ ಮಧ್ಯಂತರ ಸರ್ಕಾರದ ಮುಹಮ್ಮದ್ ಯೂನುಸ್ ಆಕ್ಷೇಪ ವ್ಯಕ್ತಪಡಿಸಿರುವ ಹಿನ್ನೆಲೆಯಲ್ಲಿ ವಿವಾದ ತಲೆದೋರಿದೆ.
ತುಲಿಪ್ ಸಿದ್ದೀಕ್ ಬ್ರಿಟನ್ ಸಂಪುಟದಲ್ಲಿ ಖಜಾನೆಯ ಆರ್ಥಿಕ ಕಾರ್ಯದರ್ಶಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ ಹಾಗೂ ಬ್ರಿಟನ್ ನ ಹಣಕಾಸು ಮಾರುಕಟ್ಟೆಯಲ್ಲಿನ ಲಂಚವನ್ನು ನಿಭಾಯಿಸುವುದು ಅವರ ಜವಾಬ್ದಾರಿಯಾಗಿರುತ್ತದೆ.
"ತುಲಿಪ್ ಸಿದ್ದೀಕ್ ಅವರಿಗೆ ಉಡುಗೊರೆಯಾಗಿ ನೀಡಿದ್ದ ಆಸ್ತಿಗಳ ಬಗ್ಗೆ ಭ್ರಷ್ಟಾಚಾರ ವಿರೋಧಿ ಆಯೋಗ ತನಿಖೆ ನಡೆಸಬೇಕು ಎನ್ನುವುದು ನನ್ನ ಬಯಕೆ. ಹಸೀನಾ ಅವರ ಅವಾಮಿ ಲೀಗ್ ನ ಮಿತ್ರಪಕ್ಷಗಳು ಖರೀದಿಸಿದ್ದ ಆಸ್ತಿಗಳನ್ನು ಬಾಂಗ್ಲಾದೇಶಕ್ಕೆ ಮರಳಿಸಬೇಕು. ಇದು ಮಧ್ಯಂತರ ಸರ್ಕಾರದ ಉದ್ದೇಶ." ಎಂದು ಸಂಡೆ ಟೈಮ್ಸ್ ಜತೆ ಮಾತನಾಡಿದ ಯೂನುಸ್ ಅಭಿಪ್ರಾಯಪಟ್ಟಿದ್ದರು.
ತುಲಿಪ್ ಸಿದ್ದೀಕ್ ವಾಸಿಸುವ ಕೆಲ ಲಂಡನ್ ಆಸ್ತಿಗಳು ಅವಾಮಿ ಲೀಗ್ ನಿಂದ ಉಡುಗೊರೆಯಾಗಿ ಬಂದವು ಎಂಬ ಮಾಧ್ಯಮ ವರದಿಗಳ ಬಗ್ಗೆ ಪ್ರತಿಕ್ರಿಯಿಸಿದ ಅವರು, "ನಾನೇನು ತಪ್ಪು ಮಾಡಿಲ್ಲ" ಎಂದು ಸ್ಪಷ್ಟಪಡಿಸಿದ್ದರು.
ಈ ವಿವಾದದ ಹಿನ್ನೆಲೆಯಲ್ಲಿ ಪ್ರಧಾನಿ ಕೀರ್ ಸ್ಟಾರ್ಮರ್ ಅವರು ತುಲಿಪ್ ಸಿದ್ದೀಕ್ ಅವರನ್ನು ವಜಾ ಮಾಡಬೇಕು ಎಂದು ವಿರೋಧ ಪಕ್ಷದ ನಾಯಕ ಕೆಮಿ ಬಡೆನೋಚ್ ಆಗ್ರಹಿಸಿದ್ದಾರೆ. "ತಮ್ಮ ಖಾಸಗಿ ಸ್ನೇಹಿತೆಯನ್ನು ಭ್ರಷ್ಟಾಚಾರ ವಿರೋಧಿ ಸಚಿವರಾಗಿ ಸ್ಟಾರ್ಮರ್ ನೇಮಿಸಿದ್ದರು. ಆದರೆ ಅವರ ಮೇಲೆಯೇ ಭ್ರಷ್ಟಾಚಾರದ ಆರೋಪವಿದೆ" ಎಂದು ಟೀಕಿಸಿದ್ದಾರೆ. ಆದರೆ ಪ್ರಧಾನಿ, ತುಲಿಪ್ ಸಿದ್ದೀಕ್ ಅವರ ಮೇಲೆ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ತುಲಿಪ್ ಸಿದ್ದೀಕ್ ವಿರುದ್ಧದ ಭ್ರಷ್ಟಾಚಾರ ಆರೋಪದ ಬಗ್ಗೆ ಪ್ರತಿಕ್ರಿಯಿಸಿದ ಯೂನುಸ್, "ಭ್ರಷ್ಟಾಚಾರ ನಿಗ್ರಹ ಸಚಿವರಾಗಿರುವ ಅವರು ಆಸ್ತಿಗಳ ವಿಚಾರದಲ್ಲಿ ತಮ್ಮನ್ನೇ ಸಮರ್ಥಿಸಿಕೊಳ್ಳುತ್ತಿರುವುದು ನಿಜಕ್ಕೂ ಹಾಸ್ಯಾಸ್ಪದ" ಎಂದು ಹೇಳಿದ್ದಾರೆ.
2005ರಲ್ಲಿ ಬಾಂಗ್ಲಾದೇಶದ ಉದ್ಯಮಿಯೊಬ್ಬರು ಹಸೀನಾ ಸರ್ಕಾರವನ್ನು ಪ್ರತಿನಿಧಿಸುವ ಬ್ಯಾರಿಸ್ಟರ್ ಮೊಯಿನ್ ಘನಿ ಎಂಬುವವರಿಗೆ ಹ್ಯಾಂಪ್ ಸ್ಟೆಡ್ ಫ್ಲಾಟ್ ಅನ್ನು ಉಡುಗೊರೆಯಾಗಿ ನೀಡಿದ್ದರು. ಘನಿ ಇದನ್ನು ಸಿದ್ದೀಕಿ ಅವರ ಸಹೋದರಿ ಅಜ್ಮಿನಾ ಅವರಿಗೆ 2009ರಲ್ಲಿ ಉಡುಗೊರೆಯಾಗಿ ನೀಡಿದ್ದು, ಇದರಲ್ಲಿ ಸಿದ್ದಿಕಿ ವಾಸವಿದ್ದಾರೆ.