ಭಾರತ-ಅಮೆರಿಕ ದ್ವಿಪಕ್ಷೀಯ ಸಂಬಂಧಕ್ಕೆ ಭದ್ರ ಬುನಾದಿಯಿದೆ: ಅಮೆರಿಕದಲ್ಲಿ ಪ್ರಧಾನಿ ನರೇಂದ್ರ ಮೋದಿ
ನಾಳೆ ಅಧ್ಯಕ್ಷ ಟ್ರಂಪ್ ಜತೆ ದ್ವಿಪಕ್ಷೀಯ ಸಭೆ
PC - X/@narendramodi
ವಾಷಿಂಗ್ಟನ್: ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರೊಂದಿಗೆ ದ್ವಿಪಕ್ಷೀಯ ಸಭೆಯನ್ನು ಒಳಗೊಳ್ಳುವ ಎರಡು ದಿನಗಳ ಅಧಿಕೃತ ಭೇಟಿಗಾಗಿ ಪ್ರಧಾನಿ ನರೇಂದ್ರ ಮೋದಿ ಗುರುವಾರ ಅಮೆರಿಕದ ವಾಷಿಂಗ್ಟನ್ ಡಿಸಿಗೆ ಆಗಮಿಸಿದ್ದಾರೆ.
ಅಧ್ಯಕ್ಷ ಟ್ರಂಪ್ ಎರಡನೇ ಬಾರಿ ಅಧಿಕಾರ ವಹಿಸಿಕೊಂಡ ಬಳಿಕ ಮೋದಿ ಅಮೆರಿಕಕ್ಕೆ ನೀಡುತ್ತಿರುವ ಮೊದಲ ಭೇಟಿ ಇದಾಗಿದೆ.
ಮೇರಿಲ್ಯಾಂಡ್ ನ ಜಂಟಿ ನೆಲೆ ಆ್ಯಂಡ್ರೂಸ್ ನಲ್ಲಿ ಬಂದಿಳಿದ ಪ್ರಧಾನಿ ಮೋದಿಯನ್ನು ಅಮೆರಿಕಕ್ಕೆ ಭಾರತದ ರಾಯಭಾರಿ ವಿನಯ್ ಮೋಹನ್ ಕೆವಾತ್ರ ಹಾಗೂ ಇತರ ಉನ್ನತ ಅಧಿಕಾರಿಗಳು ಸ್ವಾಗತಿಸಿದರು. ಶ್ವೇತಭವನಕ್ಕೆ ಭೇಟಿ ನೀಡುವ ಗಣ್ಯರಿಗೆ ಐತಿಹಾಸಿಕ ಅತಿಥಿಗ್ರಹ ಬ್ಲೇರ್ಹೌಸ್ ನಲ್ಲಿ ಮೋದಿ ಉಳಿದುಕೊಳ್ಳಲಿದ್ದಾರೆ.
ಅಮೆರಿಕದ ರಾಷ್ಟ್ರೀಯ ಗುಪ್ತಚರ ನಿರ್ದೇಶಕಿ ತುಳಸಿ ಗಬ್ಬಾರ್ಡ್ ಅವರನ್ನು ಭೇಟಿ ಮಾಡಿದ ಮೋದಿ, ಗುಪ್ತಚರ ಇಲಾಖೆಯ ಉನ್ನತ ಹುದ್ದೆಗೇರಿದ ಸಾಧನೆಗಾಗಿ ಅವರನ್ನು ಅಭಿನಂದಿಸಿದರು. ಬಳಿಕ ನಡೆಸಿದ ಸಭೆಯಲ್ಲಿ ಭಾರತ-ಅಮೆರಿಕ ನಡುವಿನ ಸಂಬಂಧಗಳನ್ನು ಬಲಪಡಿಸುವ ಬಗ್ಗೆ, ಭಯೋತ್ಪಾದನೆ ನಿಗ್ರಹ, ಸೈಬರ್ ಸುರಕ್ಷತೆ ಮತ್ತು ಭದ್ರತಾ ಸವಾಲುಗಳನ್ನು ಎದುರಿಸುವ ಕ್ಷೇತ್ರಗಳಲ್ಲಿ ಸಹಕಾರವನ್ನು ಹೆಚ್ಚಿಸುವ ಬಗ್ಗೆ ಚರ್ಚೆಗಳು ಕೇಂದ್ರೀಕೃತವಾಗಿದ್ದವು ಎಂದು ಭಾರತದ ನಿಯೋಗದ ಅಧಿಕಾರಿಗಳನ್ನು ಉಲ್ಲೇಖಿಸಿ ಮಾಧ್ಯಮಗಳು ವರದಿ ಮಾಡಿವೆ.
ಅಮೆರಿಕದ ರಾಷ್ಟ್ರೀಯ ಗುಪ್ತಚರ ನಿರ್ದೇಶಕಿ, ಭಾರತ-ಅಮೆರಿಕ ಸ್ನೇಹದ ಬಲವಾದ ಅನುಯಾಯಿ ತುಳಸಿ ಗಬ್ಬರ್ಡ್ರನ್ನು ಭೇಟಿ ಮಾಡಿ ಭಾರತ-ಅಮೆರಿಕ ಸ್ನೇಹದ ವಿವಿಧ ಆಯಾಮಗಳ ಬಗ್ಗೆ ಚರ್ಚೆ ನಡೆಸಿರುವುದಾಗಿ' ಪ್ರಧಾನಿ ಮೋದಿ `ಎಕ್ಸ್'ನಲ್ಲಿ ಪೋಸ್ಟ್ ಮಾಡಿದ್ದಾರೆ. ಟ್ರಂಪ್ ಸಂಪುಟದ ಹಲವು ಸದಸ್ಯರನ್ನು, ಅಮೆರಿಕದ ಉದ್ಯಮಿಗಳನ್ನು ಹಾಗೂ ಭಾರತೀಯ-ಅಮೆರಿಕನ್ ಸಮುದಾಯದ ಸದಸ್ಯರನ್ನು ಪ್ರಧಾನಿ ಮೋದಿ ಭೇಟಿ ಮಾಡಿರುವುದಾಗಿ ವರದಿಯಾಗಿದೆ.
ಎರಡು ದಿನಗಳ ಅಮೆರಿಕ ಪ್ರವಾಸದ ಸಂದರ್ಭ ಪ್ರಧಾನಿ ಮೋದಿ ಅಮೆರಿಕದ ರಾಷ್ಟ್ರೀಯ ಭದ್ರತಾ ಸಲಹೆಗಾರ ಮೈಕೆಲ್ ವಾಲ್ಟ್ಸ್, ಭಾರತೀಯ ಮೂಲದ ಉದ್ಯಮಿ ವಿವೇಕ್ ರಾಮಸ್ವಾಮಿ ಜತೆ ಸಭೆ ನಡೆಸಲಿದ್ದಾರೆ. ಭಾರತದ ಬೆಳೆಯುತ್ತಿರುವ ಇಲೆಕ್ಟ್ರಿಕ್ ವಾಹನಗಳ ವಲಯವನ್ನು ಗಮನದಲ್ಲಿಟ್ಟುಕೊಂಡು ಭಾರತದಲ್ಲಿ ಟೆಸ್ಲಾ ಫ್ಯಾಕ್ಟರಿಯನ್ನು ತೆರೆಯುವ ಬಗ್ಗೆ ಟೆಸ್ಲಾ ಸಿಇಒ ಎಲಾನ್ ಮಸ್ಕ್ ಜತೆ ಮೋದಿ ಚರ್ಚೆ ನಡೆಸಲಿದ್ದಾರೆ ಎಂದು ಭಾರತೀಯ ನಿಯೋಗ ಹೇಳಿದೆ.
ಭಾರತೀಯ ಕಾಲಮಾನ ಶುಕ್ರವಾರ ಬೆಳಿಗ್ಗೆ ಅಧ್ಯಕ್ಷ ಟ್ರಂಪ್ ಜತೆ ಪ್ರಧಾನಿ ಮೋದಿ ದ್ವಿಪಕ್ಷೀಯ ಸಭೆ ನಡೆಸಲಿದ್ದಾರೆ. ಜನವರಿ 20ರಂದು ಅಧಿಕಾರ ವಹಿಸಿಕೊಂಡ ಬಳಿಕ ಟ್ರಂಪ್ ರನ್ನು ಶ್ವೇತಭವನದಲ್ಲಿ ಭೇಟಿಯಾದ ನಾಲ್ಕನೇ ಜಾಗತಿಕ ಮುಖಂಡರಾಗಿದ್ದಾರೆ ಪ್ರಧಾನಿ ನರೇಂದ್ರ ಮೋದಿ. ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು, ಜಪಾನ್ ಪ್ರಧಾನಿ ಶಿಗೆರು ಇಷಿಬಾ ಮತ್ತು ಜೋರ್ಡಾನ್ ದೊರೆ ಅಬ್ದುಲ್ಲಾ ಕಳೆದ ತಿಂಗಳು ಟ್ರಂಪ್ರನ್ನು ಶ್ವೇತಭವನದಲ್ಲಿ ಭೇಟಿಯಾಗಿದ್ದರು.
► ಭಾರತದ ಮೇಲೆ ಹೆಚ್ಚುವರಿ ಸುಂಕಕ್ಕೆ ಟ್ರಂಪ್ ಯೋಜನೆ ?
ಈ ಮಧ್ಯೆ, ಪ್ರಧಾನಿ ಮೋದಿಯ ಜತೆಗಿನ ದ್ವಿಪಕ್ಷೀಯ ಸಭೆಗೂ ಮುನ್ನ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸಾಮಾಜಿಕ ಮಾಧ್ಯಮದಲ್ಲಿ ಮಾಡಿರುವ ಪೋಸ್ಟ್ ಒಂದು ಊಹಾಪೋಹಕ್ಕೆ ಎಡೆ ಮಾಡಿಕೊಟ್ಟಿದೆ.
ತನ್ನ `ಟ್ರುಥ್ ಸೋಷಿಯಲ್' ಸಾಮಾಜಿಕ ವೇದಿಕೆಯಲ್ಲಿ ಮಾಡಿರುವ ಪೋಸ್ಟ್ನಲ್ಲಿ ಟ್ರಂಪ್ ` ಮೂರು ಉತ್ತಮ ವಾರಗಳು, ಬಹುಷಃ ಅತ್ಯುತ್ತಮ ವಾರಗಳು. ಆದರೆ ಇವತ್ತಿನದ್ದು ಇನ್ನೂ ದೊಡ್ಡದಾಗಿದೆ. ಅಮೆರಿಕವನ್ನು ಮತ್ತೆ ಶ್ರೇಷ್ಠವನ್ನಾಗಿ ಮಾಡಬೇಕಿದೆ' ಎಂದು ಉಲ್ಲೇಖಿಸಿದ್ದಾರೆ.
ಪ್ರಧಾನಿ ಮೋದಿಯನ್ನು ಭೇಟಿ ಮಾಡುವ ಮೊದಲು ಟ್ರಂಪ್ ಪರಸ್ಪರ ಸುಂಕ ಯೋಜನೆಗಳನ್ನು ಬಹಿರಂಗಪಡಿಸಲಿದ್ದಾರೆ ಎಂದು ಶ್ವೇತಭವನ ಹೇಳಿಕೆ ನೀಡಿದೆ.
ವಾರ್ತಾ ಭಾರತಿಯ ವಾಟ್ಸ್ ಆ್ಯಪ್ ಚಾನಲ್ ಗೆ ಸೇರಲು ಕ್ಲಿಕ್ ಮಾಡಿ