ಅಮೆರಿಕ ಜತೆಗಿನ ವ್ಯಾಪಾರ, ಆರ್ಥಿಕ ಸಮಸ್ಯೆಗಳ ಇತ್ಯರ್ಥಕ್ಕೆ ಆದ್ಯತೆ: ಚೀನಾ
ಸಾಂದರ್ಭಿಕ ಚಿತ್ರ.| Photo: NDTV
ಬೀಜಿಂಗ್: ಮುಂದಿನ ವಾರ ಚೀನಾಕ್ಕೆ ಭೇಟಿ ನೀಡಲಿರುವ ಅಮೆರಿಕದ ವಾಣಿಜ್ಯ ಕಾರ್ಯದರ್ಶಿ ಗಿನಾ ರೈಮಂಡೊ ಜತೆಗಿನ ಸಭೆಯಲ್ಲಿ ಆರ್ಥಿಕ ಮತ್ತು ವ್ಯಾಪಾರಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು ಪರಿಹರಿಸುವ ನಿಟ್ಟಿನಲ್ಲಿ ಆಳವಾದ ಮಾತುಕತೆಯನ್ನು ಎದುರು ನೋಡುತ್ತಿದ್ದೇವೆ ಎಂದು ಚೀನಾದ ವಾಣಿಜ್ಯ ಇಲಾಖೆಯ ವಕ್ತಾರರು ಗುರುವಾರ ಹೇಳಿದ್ದಾರೆ.
ಜಗತ್ತಿನ ಎರಡು ಬೃಹತ್ ಆರ್ಥಿಕತೆಗಳ ನಡುವಿನ ದ್ವಿಪಕ್ಷೀಯ ಸಂಬಂಧವನ್ನು ಸುಧಾರಿಸುವ ನಿಟ್ಟಿನಲ್ಲಿ ಇತ್ತೀಚೆಗೆ ಚಾಲನೆಗೊಂಡಿರುವ ಸರಣಿ ಪ್ರಕ್ರಿಯೆಗಳ ಮುಂದುವರಿದ ಭಾಗವಾಗಿ ಮುಂದಿನ ವಾರ ಗಿನಾ ರೈಮಂಡೊ ಚೀನಾಕ್ಕೆ ಭೇಟಿ ನೀಡಿ ಉನ್ನತ ಮಟ್ಟದ ಸಭೆಯಲ್ಲಿ ಪಾಲ್ಗೊಳ್ಳುವ ಕಾರ್ಯಕ್ರಮವಿದೆ.
`ದ್ವಿಪಕ್ಷೀಯ ವ್ಯಾಪಾರ ಮತ್ತು ಹೂಡಿಕೆ ಕ್ಷೇತ್ರದಲ್ಲಿ ಚೀನಾ ಮತ್ತು ಅಮೆರಿಕ ಕೆಲವು ಸಮಸ್ಯೆ ಮತ್ತು ಸವಾಲುಗಳನ್ನು ಎದುರಿಸುತ್ತಿರುವುದನ್ನು ಗಮನಿಸಿದ್ದೇವೆ. ಅಮೆರಿಕ ಕೈಗೊಂಡಿರುವ ವ್ಯಾಪಾರ ಸಂರಕ್ಷಣೆ ಕ್ರಮಗಳು ಇದಕ್ಕೆ ಕಾರಣವಾಗಿದ್ದು ಈ ವಿಷಯವನ್ನು ಮುಂದಿನ ವಾರ ನಡೆಯುವ ಸಭೆಯಲ್ಲಿ ಪ್ರಸ್ತಾವಿಸಲಾಗುವುದು. ನ್ಯಾಯೋಚಿತ ಮತ್ತು ಸ್ಥಿರ ಆರ್ಥಿಕ ಮತ್ತು ವ್ಯಾಪಾರ ಪರಿಸರದ ರಚನೆ ನಮ್ಮ ಉದ್ದೇಶವಾಗಿದೆ' ಎಂದು ಚೀನಾದ ವಾಣಿಜ್ಯ ಇಲಾಖೆಯ ವಕ್ತಾರೆ ಶು ಜುಯೆಟಿಂಗ್ ಹೇಳಿದ್ದಾರೆ.
ಕಳೆದ ವರ್ಷ ಚೀನಾದ ಗ್ರಾಹಕ ಸರಕುಗಳಿಗೆ ಅಮೆರಿಕದ ಬೇಡಿಕೆ ಹಾಗೂ ಅಮೆರಿಕದ ಕೃಷಿ ಉತ್ಪನ್ನಗಳಿಗೆ ಚೀನಾದ ಬೇಡಿಕೆ ಕಳೆದ ವರ್ಷ ಹೆಚ್ಚಿದ ಹಿನ್ನೆಲೆಯಲ್ಲಿ ದ್ವಿಮುಖ ವ್ಯಾಪಾರ ದಾಖಲೆಯ 690 ಶತಕೋಟಿ ಡಾಲರ್ಗೆ ಏರಿಕೆಯಾಗಿತ್ತು. ಆದರೆ ಈ ವರ್ಷ ದ್ವಿಮುಖ ವ್ಯಾಪಾರ ಪ್ರಮಾಣದಲ್ಲಿ ಕುಸಿತ ದಾಖಲಾಗಿದೆ ಎಂದು ಅಮೆರಿಕದ ಅಂಕಿಅಂಶ ಇಲಾಖೆಯ ಹೇಳಿಕೆ ತಿಳಿಸಿದೆ.