ಶ್ವೇತಭವನದ ಪತ್ರಕರ್ತರ ಭೋಜನಕೂಟದ ಸ್ಥಳದಲ್ಲಿ ಫೆಲೆಸ್ತೀನ್ ಪರ ಘೋಷಣೆ
►ಕಾರ್ಯಕ್ರಮಕ್ಕೆ ಆಗಮಿಸಿದ್ದ ಬೈಡೆನ್ರತ್ತ ಫೆಲೆಸ್ತೀನ್ ಧ್ವಜ ಬೀಸಿದ ಪ್ರತಿಭಟನಕಾರರು. ►* ಭೋಜನಕೂಟ ನಡೆಯುತ್ತಿದ್ದ ಹೊಟೇಲ್ನ ತುತ್ತ ತುದಿಯಲ್ಲಿ ಅರಳಿದ ಫೆಲೆಸ್ತೀನ್ ಧ್ವಜ
PC : NDTV
ವಾಶಿಂಗ್ಟನ್: ಶ್ವೇತಭವನದ ವರದಿಗಾರರಿಗಾಗಿ ಶನಿವಾರ ವಾರ್ಷಿಕ ಭೋಜನ ಕೂಟವನ್ನು ಏರ್ಪಡಿಸಲಾಗಿದ್ದ ಹೊಟೇಲ್ನ ಹೊರಭಾಗದಲ್ಲಿ ಜಮಾಯಿಸಿದ ನೂರಾರು ಮಂದಿ ಪ್ರತಿಭಟನಕಾರರು ಗಾಝಾ ಮೇಲೆ ಇಸ್ರೇಲ್ ದಾಳಿಯನ್ನು ನಿಲ್ಲಿಸುವಂತೆ ಘೋಷಣೆಗಳನ್ನು ಕೂಗಿದರು. ಅಲ್ಲದೆ ಪಾಶ್ಚಾತ್ಯ ಸುದ್ದಿಮಾಧ್ಯಮಗಳು ಗಾಝಾ ಸಂಘರ್ಷದ ಬಗ್ಗೆ ತಪ್ಪು ಮಾಹಿತಿ ನೀಡುತ್ತಿರುವುದನ್ನು ಖಂಡಿಸಿದರು.
ಭೋಜನಕೂಟದಲ್ಲಿ ಪಾಲ್ಗೊಂಡ ಅಧ್ಯಕ್ಷ ಬೈಡೆನ್ ಅವರು ಪತ್ರಕರ್ತರನ್ನುದ್ದೇಶಿಸಿ ಹತ್ತು ನಿಮಿಷ ಭಾಷಣ ಮಾಡಿದರು. ಆದರೆ ಅವರು ತನ್ನ ಭಾಷಣದಲ್ಲಿ ಗಾಝಾ ಸಂಘರ್ಷದ ಕುರಿತಾಗಲಿ ಅಥವಾ ಅಲ್ಲಿ ಭುಗಿಲೆದ್ದಿರುವ ಮಾನವೀಯ ಬಿಕ್ಕಟ್ಟಿನ ಕುರಿತಾಗಲಿ ಯಾವುದೇ ಪ್ರಸ್ತಾವವನ್ನು ಮಾಡಲಿಲ್ಲ.
ಶ್ವೇತಭವನದಿಂದ ಭೋಜನ ಕೂಟ ಆಯೋಜಿಸಲಾಗಿದ್ದ ವಾಶಿಂಗ್ಟನ್ ಹಿಲ್ಟನ್ ಹೊಟೇಲ್ಗೆ ಬೈಡನ್ ಅವರು ಬೆಂಗಾವಲು ವಾಹನಗಳೊಂದಿಗೆ ಆಗಮಿಸಿದಾಗ ಆವರಣದಲ್ಲಿ ಜಮಾಯಿಸಿದ್ದ ನೂರಕ್ಕೂ ಅಧಿಕ ಪ್ರತಿಭಟನಕಾರರು ಫೆಲೆಸ್ತೀನ್ ಧ್ವಜಗಳನ್ನು ಬೀಸಿದರು. ಹೊಟೇಲ್ನೊಳಗೆ ತೆರಳುತ್ತಿದ್ದ ಅತಿಥಿಗಳನ್ನು ಉದ್ದೇಶಿಸಿ ‘ನಿಮಗೆ ನಾಚಿಕೆಯಾಗಬೇಕು’ ಎಂದು ಘೋಷಣೆಗಳನ್ನು ಕೂಗಿದರು.
ಪಾಶ್ಚಾತ್ಯ ಮಾಧ್ಯಮಗಳು ಗಾಝಾದಲ್ಲಿ ಇಸ್ರೇಲ್ ನಡೆಸುತ್ತಿರುವ ಎಲ್ಲಾ ಭಯಾನಕ ಕೃತ್ಯಗಳನ್ನು ಮುಚ್ಚಿಹಾಕುತ್ತಿವೆಯೆಂದು ಅವರು ಘೋಷಣೆಗಳನ್ನು ಕೂಗಿದರು.
ಈ ಮಧ್ಯೆ ವಾಶಿಂಗ್ಟನ್ ಹಿಲ್ಟನ್ ಬೊಟೇಲ್ನಲ್ಲಿ ತಂಗಿದ್ದವರೊಬ್ಬರು ಹೊಟೇಲ್ನ ತುತ್ತತುದಿಯ ಕೊಠಡಿಯ ಕಿಟಕಿಯೊಂದರಿಂದ ಫೆಲೆಸ್ತೀನ್ ಧ್ವಜವನ್ನು ಅರಳಿಸಿದಾಗ ಪ್ರತಿಭಟನಕಾರರು ಹರ್ಷೋದ್ಘಾರ ಮಾಡಿದರು.
ಕಳೆದ ವರ್ಷದ ಆಕ್ಟೋಬರ್ನಲ್ಲಿ ಗಾಝಾ ಯುದ್ದ ಆರಂಭಗೊಂಡ ಬಳಿಕ , ಇಸ್ರೇಲ್ ಸೇನೆಯು ಅಲ್ಲಿ 142 ಮಾಧ್ಯಮ ಮಂದಿಯನ್ನು ಹತ್ಯೆಗೈದಿದೆ ಹಾಗೂ ಕನಿಷ್ಠ 40 ಫೆಲೆಸ್ತೀನ್ ಪತ್ರಕರ್ತರನ್ನು ಬಂಧಿಸಿದೆ ಎಂದು ಗಾಝಾದಲ್ಲಿನ ಸರಕಾರಿ ಮಾಧ್ಯಮ ಕಾರ್ಯಾಲಯ ವರದಿ ಮಾಡಿದೆ.