ಶ್ವೇತಭವನಕ್ಕೆ ನುಗ್ಗಲು ಪ್ರಯತ್ನಿಸಿದ ಫೆಲೆಸ್ತೀನ್ ಪರ ಪ್ರತಿಭಟನಾಕಾರರು
Photo: NDTV
ವಾಷಿಂಗ್ಟನ್: ಗಾಝಾದಲ್ಲಿ ಇಸ್ರೇಲ್ ನಡೆಸುತ್ತಿರುವ ಯುದ್ಧವನ್ನು ಖಂಡಿಸಿ ಅಮೆರಿಕದ ವಾಷಿಂಗ್ಟನ್ನಲ್ಲಿ ಶನಿವಾರ ಪ್ರತಿಭಟನೆ ನಡೆಸಿದ ಫೆಲೆಸ್ತೀನ್ ಬೆಂಬಲಿಗರು ಶ್ವೇತಭವನದ ಹೊರಗೆ ಇದ್ದ ತಡೆಬೇಲಿಯನ್ನು ಧ್ವಂಸಗೊಳಿಸಲು ಪ್ರಯತ್ನಿಸಿದರಲ್ಲದೆ ಅಮೆರಿಕ ಅಧ್ಯಕ್ಷ ಜೋ ಬೈಡನ್ ವಿರುದ್ಧ ಅವಹೇಳನಕಾರಿ ಘೋಷಣೆ ಕೂಗಿದ್ದಾರೆ ಎಂದು ವರದಿಯಾಗಿದೆ.
ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗುವ ಸಾಧ್ಯತೆಯನ್ನು ಮನಗಂಡು ಕೆಲವು ಸಿಬಂದಿಗಳನ್ನು ತಕ್ಷಣ ತೆರವುಗೊಳಿಸಲಾಗಿದೆ ಎಂದು ಶ್ವೇತಭವನದ ಅಧಿಕಾರಿಗಳನ್ನು ಉಲ್ಲೇಖಿಸಿ ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ. ಪ್ರತಿಭಟನಾಕಾರರು ಹಿಂಸಾಚಾರಕ್ಕೆ ಮುಂದಾಗಿ ಶ್ವೇತಭವನದ ತಡೆಗೋಡೆಗೆ ಹಾನಿ ಎಸಗಿರುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಭದ್ರತಾ ಸಿಬಂದಿಯತ್ತ ನೀರಿನ ಬಾಟಲಿಗಳು ಹಾಗೂ ಧ್ವಜದ ಕೋಲುಗಳನ್ನು ಎಸೆದ ಪ್ರತಿಭಟನಾಕಾರರು ತಡೆಗೋಡೆಯನ್ನು ಏರಲು ಪ್ರಯತ್ನಿಸಿದರು.
ಶ್ವೇತಭವನದ ಹೊರಗಿನ ತಡೆಬೇಲಿಗೆ ಸ್ವಲ್ಪ ಹಾನಿಯಾಗಿದೆ. ಆದರೆ ಪ್ರಧಾನ ತಡೆಬೇಲಿಗೆ ಹಾನಿಯಾಗಿಲ್ಲ. ಪ್ರತಿಭಟನಾಕಾರರನ್ನು ಅಲ್ಲಿಂದ ಚದುರಿಸಲಾಗಿದೆ ಎಂದು ಮೂಲಗಳನ್ನು ಉಲ್ಲೇಖಿಸಿ `ದಿ ನ್ಯೂಯಾರ್ಕ್ ಪೋಸ್ಟ್' ವರದಿ ಮಾಡಿದೆ.