ಅಮೆರಿಕದ ಧ್ವಜ ಸುಟ್ಟುಹಾಕಿದ ಫೆಲೆಸ್ತೀನ್ ಪರ ಪ್ರತಿಭಟನಾಕಾರರು
Photo : REUTERS
ನ್ಯೂಯಾರ್ಕ್: ಅಮೆರಿಕದ ನ್ಯೂಯಾರ್ಕ್ ರಾಜ್ಯದ ಸೆಂಟ್ರಲ್ ಪಾರ್ಕ್ನಲ್ಲಿ ಫೆಲೆಸ್ತೀನ್ ಬೆಂಬಲಿಸಿ ಪ್ರತಿಭಟನೆ ನಡೆಸುತ್ತಿದ್ದವರು ಅಮೆರಿಕದ ಧ್ವಜಕ್ಕೆ ಬೆಂಕಿ ಹಚ್ಚಿದರು ಹಾಗೂ ಸೆಂಟ್ರಲ್ ಪಾರ್ಕ್ನಲ್ಲಿರುವ ಪ್ರಥಮ ವಿಶ್ವಯುದ್ಧದ ಸ್ಮಾರಕಕ್ಕೆ ಹಾನಿ ಎಸಗಿರುವುದಾಗಿ ವರದಿಯಾಗಿದೆ.
ಸುಮಾರು 1000 ಪ್ರತಿಭಟನಾಕಾರರು ಘೋಷಣೆ ಕೂಗುತ್ತಾ ಪ್ರತಿಭಟನಾ ಜಾಥಾದ ಮೂಲಕ ಸಾಗಿದ್ದು ಮೆಟ್ರೋಪಾಲಿಟನ್ ಮ್ಯೂಸಿಯಂ ಆಫ್ ಆಟ್ರ್ಸ್ನಲ್ಲಿ ಮೇ 6ರಂದು ನಡೆದ ಮೆಟ್ ಗಾಲ(ಫ್ಯಾಶನ್ ಶೋ) ಕಾರ್ಯಕ್ರಮದ ಸಭಾಂಗಣದ ಬಳಿ ಬಾರದಂತೆ ಪೊಲೀಸರು ತಡೆದರು. ಆಗ ಸೆಂಟ್ರಲ್ ಪಾರ್ಕ್ನ ವಿಶ್ವಯುದ್ಧ ಸ್ಮಾರಕದ ಬಳಿ ಸೇರಿದ ಪ್ರತಿಭಟನಾಕಾರರು ಅಮೆರಿಕದ ಧ್ವಜಕ್ಕೆ ಬೆಂಕಿಹಚ್ಚಿದರು. ಹಾಗೂ ಸ್ಮಾರಕದ ಮೇಲೆ ಕಪ್ಪು ಬಣ್ಣದಿಂದ `ಗಾಝಾ' ಎಂದು ಬರೆದರು.
ಯೋಧರ ಪ್ರತಿಮೆಯ ಮೇಲೆ ಫೆಲೆಸ್ತೀನ್ ಧ್ವಜದ ಸ್ಟಿಕರ್ ಅಂಟಿಸಿದರು. ಜತೆಗೆ ` ನರಮೇಧವನ್ನು ನಿಲ್ಲಿಸಿ, ವರ್ಣಭೇದವನ್ನು ಅಂತ್ಯಗೊಳಿಸಿ, ಫೆಲೆಸ್ತೀನ್ ಸ್ವತಂತ್ರವಾಗಲಿ' ಎಂಬ ಬ್ಯಾನರ್ ಅನ್ನು ಸ್ಮಾರಕಕ್ಕೆ ಸಿಕ್ಕಿಸಿದ್ದಾರೆ. ಕೆಲವರು ಯೋಧರ ಪ್ರತಿಮೆಯ ಮೇಲೇರಿ ಫೆಲೆಸ್ತೀನ್ ಧ್ವಜವನ್ನು ಬೀಸುತ್ತಾ ಘೋಷಣೆ ಕೂಗಿದರು. ಪ್ರಕರಣಕ್ಕೆ ಸಂಬಂಧಿಸಿ ಹತ್ತಕ್ಕೂ ಹೆಚ್ಚು ಜನರನ್ನು ಬಂಧಿಸಿರುವುದಾಗಿ ವರದಿಯಾಗಿದೆ.