ಉಕ್ರೇನ್ನಲ್ಲಿ ರಶ್ಯ ಪರ ಬೇಹುಗಾರಿಕೆ: ಮಹಿಳೆ ಬಂಧನ
ಕೀವ್: ಉಕ್ರೇನ್ ಅಧ್ಯಕ್ಷ ವೊಲೊದಿಮಿರ್ ಝೆಲೆನ್ಸ್ಕಿಯ ಚಲನವಲನದ ಬಗ್ಗೆ ಮಾಹಿತಿ ಸಂಗ್ರಹಿಸಿ ರಶ್ಯಕ್ಕೆ ರವಾನಿಸುತ್ತಿದ್ದ ಆರೋಪದಲ್ಲಿ ಮಹಿಳೆಯೊಬ್ಬರನ್ನು ಬಂಧಿಸಲಾಗಿದೆ ಎಂದು ಉಕ್ರೇನ್ ನ ಆಂತರಿಕ ಬೇಹುಗಾರಿಕೆ ಏಜೆನ್ಸಿ ವರದಿ ಮಾಡಿದೆ.
ಝೆಲೆನ್ಸ್ಕಿ ಅವರ ಪ್ರಯಾಣದ ವಿವರ, ಉಕ್ರೇನ್ನ ರಕ್ಷಣಾ ವ್ಯವಸ್ಥೆಗಳು ಮುಂತಾದ ಮಹತ್ವದ ಮಾಹಿತಿಯನ್ನು ರಶ್ಯಕ್ಕೆ ರವಾನಿಸುತ್ತಿದ್ದ ಆರೋಪದಲ್ಲಿ ದಕ್ಷಿಣ ಉಕ್ರೇನ್ನ ಬಂದರು ನಗರ ಮಿಕೊಲಾಯಿವ್ನಲ್ಲಿ ಈ ಮಹಿಳೆಯನ್ನು ಜುಲೈ 27ರಂದು ಬಂಧಿಸಲಾಗಿದೆ. ಮಿಕೊಲಾಯಿವ್ಗಿಂತ 48 ಕಿ.ಮೀ ದೂರದಲ್ಲಿರುವ ಒಚಾಕಿವ್ ನಗರದಲ್ಲಿರುವ ಉಕ್ರೇನ್ನ ಇಲೆಕ್ಟ್ರಾನಿಕ್ ಯುದ್ಧವ್ಯವಸ್ಥೆಗಳು ಮತ್ತು ಯುದ್ಧಸಾಮಾಗ್ರಿಗಳ ಡಿಪೋದ ಮಾಹಿತಿ ಕಲೆಹಾಕುತ್ತಿರುವ ಸಂದರ್ಭ ಆರೋಪಿ ಮಹಿಳೆಯನ್ನು ವಶಕ್ಕೆ ಪಡೆಯಲಾಗಿದೆ ಎಂದು ಏಜೆನ್ಸಿ ಮಾಹಿತಿ ನೀಡಿದೆ.
ಒಚಾಕಿವ್ನ ನಿವಾಸಿಯಾಗಿರುವ ಈ ಮಹಿಳೆ ಸ್ಥಳೀಯ ಸೇನಾನೆಲೆಯಲ್ಲಿ ಯೋಧರಿಗೆ ಸರಕುಗಳನ್ನು ಒದಗಿಸುವ ಸೇನಾ ಘಟಕದಲ್ಲಿ ಈ ಮಹಿಳೆ ಕೆಲಸ ಮಾಡುತ್ತಿದ್ದಳು. ಈಕೆಯ ಮೇಲಿನ ಆರೋಪ ಸಾಬೀತಾದರೆ 12 ವರ್ಷದವರೆಗೆ ಜೈಲುಶಿಕ್ಷೆಗೆ ಗುರಿಯಾಗಲಿದ್ದಾಳೆ ಎಂದು ಏಜೆನ್ಸಿಯ ಹೇಳಿಕೆ ತಿಳಿಸಿದೆ.