ಪಾಕಿಸ್ತಾನದಲ್ಲಿ ಹಿಂಸಾಚಾರಕ್ಕೆ ತಿರುಗಿದ ಇಮ್ರಾನ್ ಖಾನ್ ಬೆಂಬಲಿಗರ ಪ್ರತಿಭಟನೆ; ಆರು ಮಂದಿ ಮೃತ್ಯು, ಕಂಡಲ್ಲಿ ಗುಂಡು ಆದೇಶ
ಇಮ್ರಾನ್ ಖಾನ್ ಬಿಡುಗಡೆಗೆ ಆಗ್ರಹಿಸಿ ಭಾರೀ ಪ್ರತಿಭಟನೆ
PC : thehindu.com
ಇಸ್ಲಾಮಾಬಾದ್: ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಅವರನ್ನು ಜೈಲಿನಿಂದ ಬಿಡುಗಡೆ ಮಾಡುವಂತೆ ಒತ್ತಾಯಿಸಿ ಇಸ್ಲಾಮಾಬಾದ್ ನಲ್ಲಿ ನಡೆದ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿದ್ದು, ಈ ವೇಳೆ 6 ಮಂದಿ ಮೃತಪಟ್ಟಿದ್ದಾರೆ.
ಪ್ರತಿಭಟನಾ ವೇಳೆ ನಾಲ್ವರು ಅರೆಸೈನಿಕ ಸಿಬ್ಬಂದಿ ಮತ್ತು ಇಬ್ಬರು ಪೊಲೀಸರು ಸಾವನ್ನಪ್ಪಿದ್ದಾರೆ ಮತ್ತು 100ಕ್ಕೂ ಹೆಚ್ಚು ಭದ್ರತಾ ಸಿಬ್ಬಂದಿಗಳು ಗಾಯಗೊಂಡಿದ್ದಾರೆ. ಇಸ್ಲಾಮಾಬಾದ್ ನಲ್ಲಿ ನಿಷೇಧಾಜ್ಞೆ ಜಾರಿಗೊಳಿಸಿ ಸೈನ್ಯವನ್ನು ನಿಯೋಜಿಸಲಾಗಿದೆ. ಹಿಂಸಾಚಾರ ನಿಯಂತ್ರಿಸಲು ಕಂಡಲ್ಲಿ ಗುಂಡು ಆದೇಶವನ್ನು ನೀಡಲಾಗಿದೆ.
ಹಿಂಸಾಚಾರದಲ್ಲಿ ಭಾಗಿಯಾದವರನ್ನು ಕೂಡಲೇ ಬಂಧಿಸುವಂತೆ ಪ್ರಧಾನಿ ಶೆಹಬಾಜ್ ಷರೀಫ್ ಸೂಚನೆಯನ್ನು ನೀಡಿದ್ದಾರೆ. ಪ್ರತಿಭಟನಾಕಾರರು ಶಸ್ತ್ರಾಸ್ತ್ರಗಳನ್ನು ಬಳಸಿದರೆ ಭದ್ರತಾ ಪಡೆಗಳು ನೇರವಾಗಿ ಗುಂಡಿನ ಮೂಲಕ ಪತ್ಯುತ್ತರ ನೀಡಲಿದ್ದಾರೆ ಎಂದು ಸಚಿವ ಮೊಹ್ಸಿನ್ ನಖ್ವಿ ತಿಳಿಸಿದ್ದಾರೆ.
ಇಸ್ಲಾಮಾಬಾದ್ ನತ್ತ ಹೊರಟಿದ್ದ ಇಮ್ರಾನ್ ಖಾನ್ ಬೆಂಬಲಿಗರನ್ನು ಪೊಲೀಸರು ಪಂಜಾಬ್ ನ ಹಾರೊ ಬಳಿ ರವಿವಾರ ತಡರಾತ್ರಿ ತಡೆದಿದ್ದರು. ಸೋಮವಾರ ಬೆಳಿಗ್ಗೆ ರ್ಯಾಲಿ ಪುನರಾರಂಭ ಮಾಡಿರುವ ಪ್ರತಿಭಟನಾಕಾರರು, ಇಸ್ಲಾಮಾಬಾದ್ ನತ್ತ ಪಯಣ ಬೆಳೆಸಿದ್ದರು.
ಇಮ್ರಾನ್ ಖಾನ್ ಅವರ ಪತ್ನಿ ಬುಶ್ರಾ ಬೀಬಿ ಹಾಗೂ ಖೈಬರ್ ಪಖ್ತುಂಖ್ವಾ ಮುಖ್ಯಮಂತ್ರಿ ಅಲಿ ಅಮೀನ್ ಗಂಡಾಪುರ್ ನೇತೃತ್ವದಲ್ಲಿ ಪ್ರತಿಭಟನೆ ನಡೆದಿದೆ. ದೇಶದಾದ್ಯಂತ ನ. 24ರಿಂದ ದೊಡ್ಡಮಟ್ಟದಲ್ಲಿ ಪ್ರತಿಭಟನೆ ನಡೆಸುವಂತೆ ಇಮ್ರಾನ್ ಖಾನ್ ತಮ್ಮ ಬೆಂಬಲಿಗರಿಗೆ ಈ ಮೊದಲು ಕರೆ ನೀಡಿದ್ದರು.