ಅಮೆರಿಕ ಸೆನೆಟ್ ನಲ್ಲಿ ಇಸ್ರೇಲ್ ಪ್ರಧಾನಿ ಭಾಷಣಕ್ಕೆ ವಿರೋಧ | ಪ್ರತಿಭಟನಾಕಾರರ ಬಂಧನ
ಬೆಂಜಮಿನ್ ನೆತನ್ಯಾಹು ಭಾಷಣದ ವೇಳೆ ಗೈರಾಗಲಿರುವ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್
PHOTO : AP
ವಾಷಿಂಗ್ಟನ್ : ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರ ಅಮೆರಿಕ ಭೇಟಿಗೆ ರಾಜಧಾನಿ ವಾಷಿಂಗ್ಟನ್ ನಲ್ಲಿ ವಿರೋಧ ವ್ಯಕ್ತವಾಗಿದೆ. ಅಮೆರಿಕದ ಸೆನೆಟ್ ಕಾಂಗ್ರೆಸ್ನ ಜಂಟಿ ಅಧಿವೇಶನದಲ್ಲಿ ನೆತನ್ಯಾಹು ಅವರು ಭಾಷಣ ಮಾಡುವ ವಿರುದ್ಧ ಇಸ್ರೇಲ್ ವಿರೋಧಿ ಪ್ರತಿಭಟನಕಾರರು ಧರಣಿ ನಡೆಸಿದ್ದಾರೆ ಎಂದು ಎಪಿ ಸುದ್ದಿ ಸಂಸ್ಥೆ ವರದಿ ಮಾಡಿದೆ.
PHOTO : AP
ಮಂಗಳವಾರ ಅಮೆರಿಕ ಸೆನೆಟ್, ಕಾಂಗ್ರೆಸ್ ಕಚೇರಿಯ ಹೊರಗೆ ಪ್ರತಿಭಟನೆ ನಡೆಸಿದ ಪ್ರತಿಭಟನಕಾರರು ಫೆಲೆಸ್ತೀನ್ ವಿರುದ್ಧ ಗಾಝಾದಲ್ಲಿ ನಡೆಯುತ್ತಿರುವ ಯುದ್ಧಕ್ಕೆ, ಅಮೆರಿಕ ಅಧ್ಯಕ್ಷ ಜೋ ಬೈಡೆನ್ ಇಸ್ರೇಲ್ಗೆ ಮಿಲಿಟರಿ ಮತ್ತು ಆರ್ಥಿಕ ಬೆಂಬಲ ನೀಡುತ್ತಿರುವುದನ್ನು ವಿರೋಧಿಸಿ ಘೋಷಣೆ ಕೂಗಿದರು. ಪೊಲೀಸರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದವರನ್ನು ಬಂಧಿಸಿದರು.
ಫೆಲೆಸ್ತೀನ್ ಧ್ವಜಗಳನ್ನು ಬೀಸುತ್ತಾ, ಪ್ರತಿಭಟನಾಕಾರರು, "ಗಾಝಾದ ಜನರನ್ನು ಬದುಕಲು ಬಿಡಿ!", "ನಾವು ನೆತನ್ಯಾಹು ಅವರ ಬಂಧನಕ್ಕೆ ಒತ್ತಾಯಿಸುತ್ತೇವೆ" ಎಂದು ಘೋಷಣೆ ಕೂಗಿದರು ಎನ್ನಲಾಗಿದೆ. ನೆತನ್ಯಾಹು ಭಾಷಣ ಮಾಡುವಾಗ ಪ್ರತಿಭಟನೆಗಳನ್ನು ತಡೆಯಲು, ಮುಂಜಾಗೃತ ಕ್ರಮವಾಗಿ ಕನಿಷ್ಠ 200 ಮಂದಿ ಪೊಲೀಸರನ್ನು ಸೆನೆಟ್ ಹೊರಗಡೆ ನಿಯೋಜಿಸಲಾಗಿದೆ. ಫೆನ್ಸಿಂಗ್ ಗಳನ್ನು ಹಾಕಿ ಪ್ರತಿಭಟನೆಯನ್ನು ತಡೆಯುವ ಪ್ರಯತ್ನ ಮಾಡಲಾಗಿದೆ.
ಇದಕ್ಕೂ ಮುನ್ನ ಪ್ರತಿಭಟನಾಕಾರರು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ವಾಸ್ತವ್ಯ ಹೂಡಿರುವ ವಾಟರ್ ಲಾಡ್ಜ್ ಹೊಟೇಲ್ ನೊಳಗೆ ಜಿರಳೆ ಮತ್ತು ಹುಳಗಳನ್ನು ಬಿಟ್ಟು ಅವರ ಅಮೆರಿಕ ಭೇಟಿಗೆ ವಿರೋಧ ವ್ಯಕ್ತಪಡಿಸಿದರು. ರಾತ್ರಿಯಿಡೀ ಬೆಂಕಿ ಸೂಚಕ ಅಲರಾಂಗಳನ್ನು ಎಳೆದು ಅಡ್ಡಿಪಡಿಸಿದರು ಎನ್ನಲಾಗಿದೆ.
ಸುಮಾರು ಐವತ್ತು ಡೆಮಾಕ್ರಟಿಕ್ ಸೆನೆಟರ್ಗಳು ಮತ್ತು ಪ್ರತಿನಿಧಿಗಳು ನೆತನ್ಯಾಹು ಅವರ ಭಾಷಣವನ್ನು ಬಹಿಷ್ಕರಿಸಲು ನಿರ್ಧರಿಸಿದ್ದಾರೆ. ಅಮೆರಿಕ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ ಅವರು ನೆತನ್ಯಾಹು ಅವರ ಭಾಷಣ ಸಂದರ್ಭ ಸದನಕ್ಕೆ ಗೈರಾಗಲಿದ್ದಾರೆ ಎಂದು ತಿಳಿದು ಬಂದಿದೆ.