ಪ್ರತಿಪಕ್ಷದ ಸ್ಥಾನದಲ್ಲಿ ಕೂರಲು ಪಿಟಿಐ ನಿರ್ಧಾರ
Photo : AFP
ಇಸ್ಲಾಮಾಬಾದ್: ನೂತನ ಸರಕಾರ ರಚಿಸುವ ತನ್ನ ಪ್ರಯತ್ನಗಳು ವಿಫಲವಾದ ಹಿನ್ನೆಲೆಯಲ್ಲಿ ಮಾಜಿ ಪ್ರಧಾನಿ ಇಮ್ರಾನ್ ಖಾನ್ ನೇತೃತ್ವದ ಪಾಕ್ ತೆಹ್ರಿಕೆ ಇನ್ಸಾಫ್ (ಪಿಟಿಐ) ಪಕ್ಷವು, ಪಾಕ್ ಸಂಸತ್ನಲ್ಲಿ ಪ್ರತಿಪಕ್ಷದ ಸ್ಥಾನದಲ್ಲಿ ಕುಳಿತುಕೊಳ್ಳಲು ನಿರ್ಧರಿಸಿದೆ. ಇದೇ ವೇಳೆ ಪಾಕ್ ಸಾರ್ವತ್ರಿಕ ಚುನಾವಣೆಯಲ್ಲಿ ನಡೆದಿರುವ ವ್ಯಾಪಕ ಚುನಾವಣಾ ವಂಚನೆಗಳ ವಿರುದ್ಧ ದೇಶಾದ್ಯಂತ ಪ್ರತಿಭಟನೆ ನಡೆಸುವುದಾಗಿ ಅದು ಘೋಷಿಸಿದೆ.
ಪ್ರಧಾನಿ ಅಭ್ಯರ್ಥಿಯಾಗಿ ಉಮರ್ ಆಯ್ಯೂಬ್ ಖಾನ್ ಹಾಗೂ ಪಂಜಾಬ್ ಪ್ರಾಂತದ ಮುಖ್ಯಮಂತ್ರಿ ಅಭ್ಯರ್ಥಿಯಾಗಿ ಅಸ್ಲಾಂ ಇಕ್ಬಾಲ್ ಅವರನ್ನು ಹೆಸರಿಸಿದ್ದ ಪಿಟಿಐ, ಗುರುವಾರದಂದು ತನ್ನ ನಿಲುವನ್ನು ಬದಲಾಯಿಸಿ ಪ್ರತಿಪಕ್ಷ ಸ್ಥಾನದಲ್ಲಿ ಕುಳಿತುಕೊಳ್ಳಲು ನಿರ್ಧರಿಸಿರುವುದಾಗಿ ತಿಳಿಸಿದೆ.
ಪಕ್ಷದ ಸಂಸ್ಥಾಪಕ ಇಮ್ರಾನ್ ಖಾನ್ ಅವರ ಸೂಚನೆಯಂತೆ ಪಿಟಿಐ ಈ ನಿರ್ಧಾರವನ್ನು ತೆಗೆದುಕೊಂಡಿದೆಯೆಂದು ಪಕ್ಷದ ಮುಖಂಡ, ನ್ಯಾಯವಾದಿ ಮುಹಮ್ಮದ್ ಅಲಿ ಸೈಫ್ ಅವರು ಹೇಳಿದ್ದಾರೆ.
ಫೆಬ್ರವರಿ 8ರಂದು ನಡೆ ಪಾಕ್ ರಾಷ್ಟ್ರೀಯ ಅಸೆಂಬ್ಲಿಗೆ ನಡೆದ ಚುನಾವಣೆಯಲ್ಲಿ ಯಾವುದೇ ಪಕ್ಷವು ಸ್ಪಷ್ಟ ಬಹುಮತವನ್ನು ಸಾಧಿಸಲು ವಿಫಲವಾಗಿರುವ ಹಿನ್ನೆಲೆಯಲ್ಲಿ ದೇಶದ ಪ್ರಮುಖ ರಾಜಕೀಯ ಪಕ್ಷಗಳಾದ ಪಾಕಿಸ್ತಾನ್ ಮುಸ್ಲಿ ಲೀಗ್ (ಪಿಎಂಎಲ್-ಎನ್) ಹಾಗೂ ಪಾಕಿಸ್ತಾನ್ ಪೀಪಲ್ಸ್ ಪಾರ್ಟಿ (ಪಿಪಿಪಿ) ಮೈತ್ರಿ ಸರಕಾರ ರಚಿಸುವ ಪ್ರಯತ್ನವನ್ನು ತೀವ್ರಗೊಳಿಸಿವೆ.
ಚುನಾವಣೆಯಲ್ಲಿ ಇಮ್ರಾನ್ ಖಾನ್ ಅವರ ಪಿಟಿಐ ಪಕ್ಷ ಬೆಂಬಲಿತ ಪಕ್ಷೇತರ ಅಭ್ಯರ್ಥಿಗಳು ಅತ್ಯಧಿಕ ಸ್ಥಾನಗಳನ್ನು ಗೆದ್ದಿದ್ದರು.
ಈ ಮಧ್ಯೆ ನವಾಝ್ ಶರೀಫ್ ನೇತೃತ್ವದ (ಪಿಎಂಎಲ್-ಎನ್) ಸರಕಾರ ರಚಿಸುವುದಾಗಿ ಘೋಷಿಸಿದೆ. ಹಲವರು ಪಕ್ಷೇತರ ಸಂಸದರು ಪಕ್ಷಕ್ಕೆ ಸೇರ್ಪಡೆಗೊಂಡಿದ್ದು, ತಾನು ಸರಕಾರ ರಚನೆಗೆ ಯೋಗ್ಯವಾದ ಸಂಖ್ಯಾಬಲವನ್ನು ಹೊಂದಿರುವುದಾಗಿ ಅದು ಹೇಳಿದೆ.
ಫೆಬ್ರವರಿ 8ರಂದು ನಡೆದ 263 ಸದಸ್ಯ ಬಲದ ರಾಷ್ಟ್ರೀಯ ಅಸೆಂಬ್ಲಿ ಉನಾವಣೆಯಲ್ಲಿ ಇಮ್ರಾನ್ ಖಾನ್ ನೇತೃತ್ವದ ಪಿಟಿಐ ಬೆಂಬಲಿತ ಪಕ್ಷೇತರ ಅಭ್ಯರ್ಥಿಗಳು 93 ಸ್ಥಾನಗಳಲ್ಲಿ ಜಯಗಳಿಸಿದ್ದಾರೆ. ನವಾಝ್ ಶರೀಫ್ ಅವರ ಪಿಎಂಎಲ್ (ಎನ್) 75 ಸ್ಥಾನಗಳನ್ನು ಪಡೆದಿದೆ. ಬಿಲಾವಲ್ ಝರ್ದಾರಿ ಭುಟ್ಟೋ ನೇತೃತ್ವದ ಪಿಪಿಪಿ 54 ಸೀಟುಗಳನ್ನು ಗೆದ್ದು ತೃತೀಯ ಸ್ಥಾನಿಯಾಗಿದೆ.
ಪಿಎಂಎಲ್(ಎನ್) ಹಾಗೂ ಪಿಪಿಪಿ ಚುನಾವಣೋತ್ತರ ಮೈತ್ರಿಯನ್ನು ಏರ್ಪಡಿಸಿಕೊಂಡಿದ್ದು, ಸರಕಾರ ರಚಿಸುವ ಸನ್ನಾಹದಲ್ಲಿದೆ. 17 ಸಂಸದರನ್ನು ಹೊಂದಿರುವ ಎಂಕ್ಯೂಎಂ-ಪಿ ಪಕ್ಷ ಕೂಡಾ ಮೈತ್ರಿಕೂಟಕ್ಕೆ ಬೆಂಬಲ ಘೋಷಿಸಿದೆ.
266 ಸದಸ್ಯ ಬಲದ ಪಾಕ್ ರಾಷ್ಟ್ರೀಯ ಅಸೆಂಬ್ಲಿಯಲ್ಲಿ 265 ಸ್ಥಾನಗಳಿಗೆ ಚುನಾವಣೆ ನಡೆಯುತ್ತದೆ ಹಾಗೂ ಸರಕಾರ ರಚನೆಗೆ 133 ಸ್ಥಾನಗಳ ಅಗತ್ಯವಿದೆ.