ಹೆಚ್ಚು ಮಕ್ಕಳನ್ನು ಹೊಂದಲು ರಶ್ಯದ ಮಹಿಳೆಯರಿಗೆ ಪುಟಿನ್ ಕರೆ
ವ್ಲಾದಿಮಿರ್ ಪುಟಿನ್ | Photo: PTI
ಮಾಸ್ಕೊ : ದೇಶದ ಜನಸಂಖ್ಯೆಯನ್ನು ಹೆಚ್ಚಿಸುವ ಉದ್ದೇಶದಿಂದ ಮಹಿಳೆಯರು 8ಕ್ಕಿಂತ ಹೆಚ್ಚು ಮಕ್ಕಳನ್ನು ಹೊಂದಿರಬೇಕು. ಕುಟುಂಬ ಬೆಳೆದರೆ ದೇಶದ ಜನಸಂಖ್ಯೆಯೂ ಬೆಳೆಯುತ್ತದೆ. ದೇಶದ ಜನಸಂಖ್ಯೆಯನ್ನು ಹೆಚ್ಚಿಸುವುದು ಮುಂಬರುವ ದಶಕಗಳ ಗುರಿಯಾಗಿದೆ ಎಂದು ರಶ್ಯ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಹೇಳಿದ್ದಾರೆ.
ರಶ್ಯ-ಉಕ್ರೇನ್ ಯುದ್ಧದಲ್ಲಿ ಸಾವನ್ನಪ್ಪಿದವರ ಪ್ರಮಾಣ ಹೆಚ್ಚಿದೆ ಎಂಬ ಮಾಧ್ಯಮಗಳ ವರದಿಯ ಬೆನ್ನಲ್ಲೇ ಪುಟಿನ್ ಈ ಹೇಳಿಕೆ ನೀಡಿದ್ದಾರೆ. ಮಾಸ್ಕೋದಲ್ಲಿ ನಡೆಯುತ್ತಿರುವ ‘ಜಾಗತಿಕ ರಶ್ಯನ್ ಜನತೆಯ ಸಮಾವೇಶ’ವನ್ನು ಉದ್ದೇಶಿಸಿ ವೀಡಿಯೊ ಕಾನ್ಫರೆನ್ಸಿಂಗ್ ಮೂಲಕ ಮಾತನಾಡಿದ ಅವರು ‘ ನಮ್ಮ ಬಹುತೇಕ ಕುಟುಂಬಗಳಲ್ಲಿ 4, 5 ಅಥವಾಆ ಹೆಚ್ಚಿನ ಮಕ್ಕಳನ್ನು ಬೆಳೆಸಲಾಗುತ್ತಿದೆ. ನಮ್ಮ ಮುತ್ತಾತ, ಮುತ್ತಜ್ಜಿಯರ ಕಾಲದಲ್ಲಿ ಕುಟುಂಬದಲ್ಲಿ 7 ಅಥವಾ 8 ಮಕ್ಕಳಿರುತ್ತಿದ್ದರು ಎಂಬುದನ್ನು ನೆನಪಿಸಿಕೊಳ್ಳಿ. ಈ ಸಂಪ್ರದಾಯವನ್ನು ಉಳಿಸಿ ಪುನರುಜ್ಜೀವನಗೊಳಿಸೋಣ. ಕುಟುಂಬವು ಕೇವಲ ದೇಶ ಮತ್ತು ಸಮಾಜದ ಅಡಿಪಾಯವಲ್ಲ, ಇದು ಆಧ್ಯಾತ್ಮಿಕತೆಯ ವಿದ್ಯಮಾನವಾಗಿದೆ, ನೈತಿಕತೆಯ ಮೂಲವಾಗಿದೆ. ರಶ್ಯನ್ ಆಗಿರುವುದು ರಾಷ್ಟ್ರೀಯತೆಗಿಂತ ಹೆಚ್ಚು ಮಹತ್ವವಾಗಿದೆ ’ ಎಂದು ಹೇಳಿರುವುದಾಗಿ ವರದಿಯಾಗಿದೆ.