ವ್ಯಾಗ್ನರ್ ದಂಗೆಯ ಸಂದರ್ಭ ಪುಟಿನ್ ಮಾಸ್ಕೋದಿಂದ ಪಲಾಯನ ಮಾಡಿದ್ದರು: ವರದಿ
ಪುಟಿನ್
ಮಾಸ್ಕೊ, ಜು.6: ವ್ಯಾಗ್ನರ್ ಮುಖ್ಯಸ್ಥ ಯೆವ್ಗಿನಿ ಪ್ರಿಗೊಝಿನ್ ನೇತೃತ್ವದಲ್ಲಿ ನಡೆದ ಸಂಕ್ಷಿಪ್ತ ದಂಗೆಯ ಸಂದರ್ಭ ರಶ್ಯ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ರಾಜಧಾನಿ ಮಾಸ್ಕೋದಿಂದ ಪಲಾಯನ ಮಾಡಿದ್ದರು ಎಂದು ವರದಿಯೊಂದರಲ್ಲಿ ಪ್ರತಿಪಾದಿಸಲಾಗಿದೆ.
ಜೂನ್ 24ರಂದು ನಡೆದಿದ್ದ ಸಂಕ್ಷಿಪ್ತ ದಂಗೆಯ ಸಂದರ್ಭ ಪುಟಿನ್ ವಿಶೇಷ ವಿಮಾನದಲ್ಲಿ ಮಾಸ್ಕೋದಿಂದ ಹೊರಗೆ ತೆರಳಿದ್ದರು. ಬಹುಷಃ ವಾಲ್ದಾಯ್ ನಗರದಲ್ಲಿರುವ ತನ್ನ ಮನೆಗೆ ಅವರು ಹೋಗಿದ್ದರು. ದಂಗೆಯ ಬಹುತೇಕ ಅವಧಿಯಲ್ಲಿ ಅವರು ರಾಜಧಾನಿಯಲ್ಲಿ ಇರಲಿಲ್ಲ ಎಂದು ಸ್ವಯಂ ಗಡೀಪಾರು ಆಗಿರುವ ರಶ್ಯದ ಮಾಜಿ ಪ್ರಭಾವೀ ಉದ್ಯಮಿ ಮಿಖಾಯಿಲ್ ಕೊಡೊರ್ಕೊವ್ಸ್ಕಿ ಹೇಳಿದ್ದಾರೆ.
ದಂಗೆಯ ಸಂದರ್ಭ ಪುಟಿನ್ ಅವರ ಚಲನವಲನವನ್ನು ನಾವು ಗಮನಿಸುತ್ತಿದ್ದೆವು. ದಂಗೆಯ ವರದಿ ಪ್ರಸಾರ ಆಗುತ್ತಿದ್ದಂತೆ ಪುಟಿನ್ ಬಳಸುತ್ತಿದ್ದ ವಿಮಾನವು ಜೂನ್ 24ರಂದು ಮಾಸ್ಕೋದಿಂದ ವಾಯವ್ಯದತ್ತ ಹಾರಿದೆ. ವಾಲ್ದಾಯ್ ವಾಯುಪ್ರದೇಶ ಪ್ರವೇಶಿಸುತ್ತಿದ್ದಂತೆಯೇ ವಿಮಾನವು `ಫ್ಲೈಟ್ ಟ್ರ್ಯಾಕರ್(ವಿಮಾನ ಪತ್ತೆಹಚ್ಚುವ ವ್ಯವಸ್ಥೆ)'ನ ನಿಗಾದಿಂದ ಹೊರಗುಳಿದಿದೆ. ಇದರರ್ಥ ಪುಟಿನ್ ವಾಲ್ದಾಯ್ನಲ್ಲಿರುವ ತನ್ನ ಮನೆಗೆ ತೆರಳಿದ್ದರು. ದಂಗೆಯ ಸಂದರ್ಭ ಪುಟಿನ್ ಮಾತ್ರವಲ್ಲ, ಆಡಳಿತದ ಹಲವು ಉನ್ನತ ಮುಖಂಡರು ಮಾಸ್ಕೋದಿಂದ ಹೊರಗೆ ತೆರಳಿದ್ದರು. ಒಂದು ವೇಳೆ ವ್ಯಾಗ್ನರ್ ದಂಗೆ ಮುಂದುವರಿದಿದ್ದರೆ ವಿರೋಧ ಪಕ್ಷದವರಿಗೆ ಉತ್ತಮ ಅವಕಾಶವಿತ್ತು' ಎಂದು ಮಿಖಾಯಿಲ್ ಹೇಳಿದ್ದಾರೆ. ರಶ್ಯದ ಪ್ರಮುಖ ಇಂಧನ ಸಂಸ್ಥೆ ಯುಕೋಸ್ನ ಮುಖ್ಯಸ್ಥರಾಗಿದ್ದ ಮಿಖಾಯಿಲ್ 2003ರಲ್ಲಿ ಆಡಳಿತದ ವಿರುದ್ಧ ಭ್ರಷ್ಟಾಚಾರ ಆರೋಪ ಮಾಡಿದ ಹಿನ್ನೆಲೆಯಲ್ಲಿ 10 ವರ್ಷ ಜೈಲುಶಿಕ್ಷೆಗೆ ಗುರಿಯಾಗಿದ್ದರು. 2013ರಲ್ಲಿ ಅವರಿಗೆ ಕ್ಷಮಾದಾನ ನೀಡಿ ಬಿಡುಗಡೆಗೊಳಿಸಿದರೂ ಅವರು ಲಂಡನ್ಗೆ ಸ್ಥಳಾಂತರಗೊಂಡಿದ್ದಾರೆ.
ದಂಗೆಯ ಸಂದರ್ಭ ಪುಟಿನ್ ವಾಲ್ದಾಯ್ನ ಮನೆಯಲ್ಲಿರುವ ಬಂಕರ್ನಲ್ಲಿ ಅಡಗಿದ್ದರು. ಅವರ ಆಪ್ತರು, ಸಹಾಯಕರು ಕೂಡಾ ಅಲ್ಲಿಗೆ ಪಲಾಯನ ಮಾಡಿದ್ದರು. ಬಳಿಕ ಪುಟಿನ್ ಭದ್ರತೆಗಾಗಿ ವಾಲ್ದಾಯ್ಗೆ ಹೆಚ್ಚುವರಿ ಪಡೆಯನ್ನು ರವಾನಿಸಲಾಯಿತು. ಒಂದು ದಿನ ಅಲ್ಲೇ ತಂಗಿದ್ದ ಪುಟಿನ್ ದಂಗೆ ಅಂತ್ಯಗೊಂಡ ಬಳಿಕ ಮಾಸ್ಕೋಗೆ ಹಿಂತಿರುಗಿದ್ದಾರೆ ಎಂದು ರಶ್ಯ ಮೂಲದ ಇಸ್ರೇಲ್ ಉದ್ಯಮಿ ಲಿಯೊನಿಡ್ ನೆವ್ಜ್ಲಿನ್ ಹೇಳಿದ್ದಾರೆ.