ಬ್ರೆಝಿಲ್ ನಲ್ಲಿ ನಡೆಯುವ ಜಿ20 ಶೃಂಗಸಭೆಗೆ ಪುಟಿನ್ ಗೆ ಆಹ್ವಾನ: ಬ್ರೆಝಿಲ್ ಅಧ್ಯಕ್ಷ ಲೂಯಿಸ್
Photo : ಲೂಯಿಜ್ ಇನಾಸಿಯೊ ಲುಲಾ ಡಾ ಸಿಲ್ವಾ | PTI
ಬ್ರಸೀಲಿಯಾ: ಡಿಸೆಂಬರ್ನಲ್ಲಿ ರಿಯೊ ಡಿ ಜನೈರೊದಲ್ಲಿ ನಡೆಯುವ ಜಿ20 ಶೃಂಗಸಭೆಗೆ ರಶ್ಯ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ರನ್ನು ಆಹ್ವಾನಿಸಲಾಗುವುದು. ಅವರು ಹಾಜರಾದರೆ ಬಂಧಿಸುವುದಿಲ್ಲ ಎಂದು ಬ್ರೆಝಿಲ್ ಅಧ್ಯಕ್ಷ ಲೂಯಿಝ್ ಇನಾಸಿಯೊ ಲುಲಾ ಡ'ಸಿಲ್ವಾ ಹೇಳಿದ್ದಾರೆ.
ಹೊಸದಿಲ್ಲಿಯಲ್ಲಿ ನಡೆದ ಜಿ20 ಶೃಂಗಸಭೆಯಲ್ಲಿ ಪುಟಿನ್ ಅನುಪಸ್ಥಿತಿ ಎದ್ದು ಕಾಣುತ್ತಿತ್ತು. ಇದಕ್ಕೂ ಮುನ್ನ ದಕ್ಷಿಣ ಆಫ್ರಿಕಾದ ಜೊಹಾನ್ಸ್ ಬರ್ಗ್ ನಲ್ಲಿ ನಡೆದಿದ್ದ `ಬ್ರಿಕ್ಸ್' ಸಭೆಯಿಂದಲೂ ದೂರ ಉಳಿದಿದ್ದರು. ಉಕ್ರೇನ್ ನ ಮಕ್ಕಳನ್ನು ಕಾನೂನುಬಾಹಿರವಾಗಿ ಗಡೀಪಾರು ಮಾಡಿ ಯುದ್ಧಾಪರಾಧ ಎಸಗಿದ ಆರೋಪದಲ್ಲಿ ಪುಟಿನ್ ವಿರುದ್ಧ ಅಂತರಾಷ್ಟ್ರೀಯ ಕ್ರಿಮಿನಲ್ ನ್ಯಾಯಾಲಯ ಕಳೆದ ಮಾರ್ಚ್ ನಲ್ಲಿ ವಾರಾಂಟ್ ಜಾರಿಗೊಳಿಸಿದೆ. ಐಸಿಸಿ ನಿರ್ಣಯಕ್ಕೆ ಬ್ರೆಝಿಲ್ ಕೂಡಾ ಸಹಿ ಹಾಕಿದೆ.
`ಆದರೆ, ಬ್ರೆಝಿಲ್ ನಲ್ಲಿ ನಡೆಯುವ ಜಿ20 ಶೃಂಗಸಭೆ ಸಂದರ್ಭ ನಾನು ಅಧ್ಯಕ್ಷನಾಗಿ ಇದ್ದರೆ ಪುಟಿನ್ ಅವರನ್ನು ಬಂಧಿಸುವುದಿಲ್ಲ. ನಾವು ಶಾಂತಿಯನ್ನು ಬಯಸುವವರು ಮತ್ತು ಇದೇ ರೀತಿಯಲ್ಲಿ ಜನರನ್ನು ನಡೆಸಿಕೊಳ್ಳುವವರು. ಆದ್ದರಿಂದ ಪುಟಿನ್ ನಿರಾಳವಾಗಿ ಬ್ರೆಝಿಲ್ ಗೆ ಬರಬಹುದು. ಅಲ್ಲದೆ ಮುಂದಿನ ವರ್ಷ ಮಾಸ್ಕೋದಲ್ಲಿ ನಡೆಯುವ ಬ್ರಿಕ್ಸ್ ನ ಅಭಿವೃದ್ಧಿಶೀಲ ದೇಶಗಳ ಘಟಕದ ಸಭೆಯಲ್ಲಿ ನಾನು ಭಾಗವಹಿಸುತ್ತೇನೆ' ಎಂದು ಬ್ರೆಝಿಲ್ ಅಧ್ಯಕ್ಷರು ಹೇಳಿದ್ದಾರೆ.