ರಶ್ಯ ಮೇಲೆ ವೈಮಾನಿಕ ದಾಳಿ ಹಿನ್ನೆಲೆ: ಪಾಶ್ಚಿಮಾತ್ಯ ದೇಶಗಳಿಗೆ ಅಣ್ವಸ್ತ್ರ ಪ್ರಯೋಗದ ಎಚ್ಚರಿಕೆ ನೀಡಿದ ಪುಟಿನ್
ವ್ಲಾದಿಮಿರ್ ಪುಟಿನ್ (Photo: PTI)
ಮಾಸ್ಕೊ: ರಶ್ಯ ಮೇಲೆ ನಡೆಯುತ್ತಿರುವ ವ್ಯಾಪಕ ವೈಮಾನಿಕ ದಾಳಿಗೆ ಪ್ರತಿಯಾಗಿ ಅಣ್ವಸ್ತ್ರ ಪ್ರಯೋಗ ನಡೆಸಲಾಗುವುದು ಎಂದು ರಶ್ಯದ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಪಾಶ್ಚಿಮಾತ್ಯ ದೇಶಗಳಿಗೆ ಎಚ್ಚರಿಕೆ ನೀಡಿದ್ದಾರೆ.
ಮಾಸ್ಕೊದಲ್ಲಿ ರಶ್ಯದ ಅಣ್ವಸ್ತ್ರ ಪ್ರತಿರೋಧ ಸಾಮರ್ಥ್ಯದ ಕುರಿತು ಉನ್ನತ ಭದ್ರತಾ ಮಂಡಳಿಯೊಂದಿಗೆ ಸಭೆ ನಡೆಸಿದ ನಂತರ ಪುಟಿನ್ ರಿಂದ ಈ ಹೇಳಿಕೆ ಹೊರ ಬಿದ್ದಿದೆ.
ರಶ್ಯ ವಿರುದ್ಧ ಕ್ರೂಸ್ ಕ್ಷಿಪಣಿ ದಾಳಿ ನಡೆಸಲು ಪಾಶ್ಚಿಮಾತ್ಯ ದೇಶಗಳು ಅವಕಾಶ ನೀಡಿರುವ, ವಿಶೇಷವಾಗಿ ಅಮೆರಿಕ ಮತ್ತು ಬ್ರಿಟನ್ ಗಳು ನೀಡಿರುವ ಅವಕಾಶದ ಕುರಿತು ಕಳವಳ ವ್ಯಕ್ತವಾಗಿರುವ ಬೆನ್ನಿಗೇ ರಶ್ಯದಿಂದ ಈ ಬೆದರಿಕೆ ಹೊರ ಬಿದ್ದಿದೆ.
ರಶ್ಯ ಮೆಲೆ ‘ಸ್ಟಾರ್ಮ್ ಶಾಡೊ’ ಕ್ರೂಸ್ ಕ್ಷಿಪಣಿ ದಾಳಿ ನಡೆಸಲು ಬ್ರಿಟನ್ ಸಮ್ಮತಿ ಸೂಚಿಸಿದೆ ಎಂದು ವರದಿಯಾಗಿತ್ತು. ಬ್ರಿಟನ್ ಪ್ರಧಾನಿ ಕೀರ್ ಸ್ಟಾರ್ಮರ್ ಅವರು ಅಮೆರಿಕ ಅಧ್ಯಕ್ಷ ಜೋ ಬೈಡನ್ ಅವರನ್ನು ಭೇಟಿಯಾಗಲು ವಾಷಿಂಗ್ಟನ್ ಗೂ ತೆರಳಿದ್ದರು. ಈ ಇಬ್ಬರು ನಾಯಕರು ರಶ್ಯ ಮೇಲೆ ಉಕ್ರೇನ್ ಪ್ರಯೋಗಿಸಬಹುದಾದ ಶಸ್ತ್ರಾಸ್ತ್ರಗಳ ಕುರಿತು ಚರ್ಚಿಸಿದ್ದರು ಎನ್ನಲಾಗಿದೆ.
ಇಂತಹ ಸಾಧ್ಯತೆಯ ಕುರಿತು ರಶ್ಯ ಬೇಹುಗಾರಿಕೆ ವಿಭಾಗಕ್ಕೆ ಮುಂಚಿತವಾಗಿಯೇ ಮಾಹಿತಿ ಇತ್ತು ಹಾಗೂ ಈ ತಿಂಗಳ ಆರಂಭದಲ್ಲಿ, “ಉಕ್ರೇನ್ ನಲ್ಲಿ ನಡೆಯುತ್ತಿರುವ ಯುದ್ಧ ಪಾಶ್ಚಿಮಾತ್ಯ ದೇಶಗಳ ಮಧ್ಯಪ್ರವೇಶದಿಂದ ಉದ್ವಿಗ್ನಗೊಂಡಿರುವುದರಿಂದ ರಶ್ಯ ಅಣ್ವಸ್ತ್ರ ಒಪ್ಪಂದದ ಕುರಿತು ಪರಾಮರ್ಶೆ ನಡೆಸುವುದು ಅನಿವಾರ್ಯವಾಗಿದೆ” ಎಂದು ಹೇಳಿತ್ತು.