ವ್ಯಾಗ್ನರ್ ಮುಖಂಡನ ಹತ್ಯೆಗೆ ಯೋಜನೆ ರೂಪಿಸಿರುವ ಪುಟಿನ್: ವರದಿ
ಪುಟಿನ್ | Photo: PTI
ಕೀವ್: ವ್ಯಾಗ್ನರ್ ಗುಂಪಿನ ಮುಖಂಡ ಯೆವ್ಗಿನಿ ಪ್ರಿಗೊಝಿನ್ ಹತ್ಯೆಗೆ ರಶ್ಯದ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ರೂಪಿಸಿರುವ ಯೋಜನೆಯನ್ನು ಅಲ್ಲಿನ ಭದ್ರತಾ ಸಂಸ್ಥೆ ಕಾರ್ಯಗತಗೊಳಿಸುತ್ತಿದೆ ಎಂದು ಉಕ್ರೇನ್ನ ರಕ್ಷಣಾ ಗುಪ್ತಚರ ಮುಖ್ಯಸ್ಥರು ಹೇಳಿದ್ದಾರೆ.
ಪ್ರಿಗೊಝಿನ್ ರಶ್ಯ ಅಧ್ಯಕ್ಷರ ವಿರುದ್ಧ ಬಂಡೇಳಲು ಸಿದ್ಧತೆ ನಡೆಸುತ್ತಿರುವುದು ತಮಗೆ ಮೊದಲೇ ತಿಳಿದಿತ್ತು ಎಂದು ಉಕ್ರೇನ್ ನ ರಕ್ಷಣಾ ಗುಪ್ತಚರ ಮುಖ್ಯಸ್ಥ ಮೇಜರ್ ಜನರಲ್ ಕಿರಿಲೊ ಬುಡನೋವ್ ಹೇಳಿದ್ದಾರೆ.
ಉಕ್ರೇನ್ ನ ಮೇಲೆ ರಶ್ಯ ನಡೆಸುತ್ತಿರುವ ಪೂರ್ಣಪ್ರಮಾಣದ ಆಕ್ರಮಣದಲ್ಲಿ ಇನ್ನು ಮುಂದೆ ವ್ಯಾಗ್ನರ್ ಬಾಡಿಗೆ ಸಿಪಾಯಿಗಳ ಗುಂಪಿನಿಂದ ತಮಗೆ ಬೆದರಿಕೆ ಇರುವುದಿಲ್ಲ ಎಂದವರು ಹೇಳಿದ್ದಾರೆ.
ಬಂಡಾಯ ವಿಫಲವಾದ ಬಳಿಕ ಬೆಲಾರುಸ್ಗೆ ಗಡೀಪಾರು ಆಗಿರುವ ಪ್ರಿಗೊಝಿನ್ ಹತ್ಯೆಗೆ ಯೋಜನೆ ಸಿದ್ಧವಾಗಿದೆ ಮತ್ತು ಅದನ್ನು ಕಾರ್ಯಗತಗೊಳಿಸುವ ಸಿದ್ಧತೆಯೂ ಮುಗಿದಿದೆ. ತಕ್ಷಣದಲ್ಲಿ ಅಲ್ಲವಾದರೂ ಮುಂದಿನ ದಿನಗಳಲ್ಲಿ ಅವರು ಅದನ್ನು ಕಾರ್ಯಗತಗೊಳಿಸುವುದರಲ್ಲಿ ಸಂಶಯವಿಲ್ಲ. ಫೆಡರಲ್ ಸರ್ವಿಸ್ ಬ್ಯೂರೊ(ರಶ್ಯದ ಗುಪ್ತಚರ ಸಂಸ್ಥೆ)ಗೆ ಈ ಕಾರ್ಯವನ್ನು ವಹಿಸಲಾಗಿದೆ ಎಂಬ ಮಾಹಿತಿ ದೊರಕಿದೆ. ವ್ಯಾಗ್ನರ್ ಬಂಡಾಯವನ್ನು ಆರಂಭದಲ್ಲೇ ಮಟ್ಟಹಾಕಲು ರಶ್ಯ ನಾಯಕತ್ವ ಸಫಲವಾಗಿರಬಹುದು, ಆದರೆ ಬಂಡಾಯದ ಪ್ರಯತ್ನದಿಂದ ರಶ್ಯ ನಾಯಕತ್ವದ ಅಧಿಕಾರದ ಸ್ಥಾನ ದುರ್ಬಲಗೊಂಡಿದೆ ಎಂದು ಬುಡನೋವ್ ಹೇಳಿದ್ದಾರೆ.