ಟ್ರಂಪ್ ಒಳ್ಳೆಯ ವ್ಯಕ್ತಿ ಎಂದು ಶ್ಲಾಘಿಸಿದ ವ್ಲಾದಿಮಿರ್ ಪುಟಿನ್
ಡೊನಾಲ್ಡ್ ಟ್ರಂಪ್ , ವ್ಲಾದಿಮಿರ್ ಪುಟಿನ್ (Photo: @BRICSinfo/X)
ಮಾಸ್ಕೋ : ಅಮೆರಿಕ ಚುನಾವಣೆಯಲ್ಲಿ ಗೆದ್ದಿರುವ ಡೊನಾಲ್ಡ್ ಟ್ರಂಪ್ರನ್ನು ಅಭಿನಂದಿಸಿರುವ ರಶ್ಯ ಅಧ್ಯಕ್ಷ ವ್ಲಾದಿಮಿರ್ ಪುಟಿನ್, ತುರುಸಿನ ಚುನಾವಣಾ ಪ್ರಚಾರದ ಸಂದರ್ಭ ಅಸಾಧಾರಣ ಧೈರ್ಯ ತೋರಿದ ಟ್ರಂಪ್ ಒಳ್ಳೆಯ ವ್ಯಕ್ತಿ ಎಂದು ಶ್ಲಾಘಿಸಿದ್ದಾರೆ.
ಪಾಶ್ಚಿಮಾತ್ಯ ನಾಗರಿಕತೆಯನ್ನು ರಶ್ಯ ಎಂದಿಗೂ ಶತ್ರುವಾಗಿ ನೋಡುವುದಿಲ್ಲ ಎಂದು ಹೇಳುವ ಮೂಲಕ ಟ್ರಂಪ್ ಗೆಲುವಿನ ಬಳಿಕ ರಶ್ಯದ ಕಾರ್ಯನೀತಿಯಲ್ಲಿ ಪ್ರಮುಖ ಬದಲಾವಣೆಯ ಸುಳಿವು ನೀಡಿದ್ದಾರೆ ಎಂದು `ಸ್ಕೈ ನ್ಯೂಸ್' ವರದಿ ಮಾಡಿದೆ. `ಅಮೆರಿಕವು ವಿಶ್ವಾಸವಿರಿಸುವ ಯಾವುದೇ ಅಧ್ಯಕ್ಷರ ಜತೆ ಕೆಲಸ ಮಾಡಲು ನಾವು ಸಿದ್ಧವಿರುವುದಾಗಿ ಈಗಾಗಲೇ ಸ್ಪಷ್ಟಪಡಿಸಿದ್ದೇನೆ. ನಾವಿದನ್ನು ಈ ಹಿಂದೆಯೂ ಮಾಡಿದ್ದೆವು. ಟ್ರಂಪ್ಗೆ ನಾನೇ ಕರೆ ಮಾಡಿ ಮಾತಾಡಿದರೆ ಅವಮಾನ ಎಂದು ನಾನು ಭಾವಿಸುವುದಿಲ್ಲ. ಯಾಕೆಂದರೆ ಈ ಹಿಂದೆ ಪಾಶ್ಚಿಮಾತ್ಯ ದೇಶಗಳ ಮುಖಂಡರು ಹಲವು ಬಾರಿ ಕರೆ ಮಾಡಿ ನನ್ನೊಂದಿಗೆ ಮಾತನಾಡಿದ್ದಾರೆ. ಆದರೆ ಅದೇಕೋ ಗೊತ್ತಿಲ್ಲ, ಏಕಾಏಕಿ ಮಾತುಕತೆಯನ್ನು ನಿಲ್ಲಿಸಿಬಿಟ್ಟರು ಎಂದು ಸಂದರ್ಶನವೊಂದರಲ್ಲಿ ಪುಟಿನ್ ಹೇಳಿದ್ದಾರೆ.
ಚುನಾವಣಾ ಪ್ರಚಾರದ ಸಂದರ್ಭ ಉಕ್ರೇನ್ ಬಿಕ್ಕಟ್ಟು ಅಂತ್ಯಗೊಳಿಸುವ ಬಗ್ಗೆ, ರಶ್ಯದ ಜತೆ ಸಂಬಂಧ ಮರುಸ್ಥಾಪಿಸುವ ಬಗ್ಗೆ ಟ್ರಂಪ್ ನೀಡಿದ ಹೇಳಿಕೆಗಳು ಗಮನಾರ್ಹವಾಗಿದೆ. ಟ್ರಂಪ್ ಆಡಳಿತವು ಬಯಸಿದಲ್ಲಿ ಸಂಪರ್ಕವನ್ನು ಪುನರಾರಂಭಿಸಲು ಸಿದ್ಧನಿದ್ದೇನೆ ಮತ್ತು ಟ್ರಂಪ್ ಅವರೊಂದಿಗೆ ಚರ್ಚೆಗೆ ಸಿದ್ಧ ಎಂದು ಪುಟಿನ್ ಹೇಳಿರುವುದಾಗಿ ವರದಿಯಾಗಿದೆ.
ಇದಕ್ಕೂ ಮುನ್ನ ಹೇಳಿಕೆ ನೀಡಿದ್ದ ರಶ್ಯ ಅಧ್ಯಕ್ಷರ ವಕ್ತಾರ ಡಿಮಿಟ್ರಿ ಪೆಸ್ಕೋವ್ `ಚುನಾವಣೆಯಲ್ಲಿ ಗೆದ್ದರೆ ಉಕ್ರೇನ್ ನಲ್ಲಿನ ಸಂಘರ್ಷವನ್ನು ತ್ವರಿತವಾಗಿ ಪರಿಹರಿಸುತ್ತೇನೆಂಬ ಟ್ರಂಪ್ ಹೇಳಿಕೆ ಉತ್ಪ್ರೇಕ್ಷೆಯಾಗಿದೆ. ರಾತ್ರಿ ಬೆಳಗಾಗುವುದರೊಳಗೆ ಇದನ್ನು ಮಾಡಲು ಖಂಡಿತಾ ಸಾಧ್ಯವಿಲ್ಲ. ಆದರೆ ಹೊಸ ಆಡಳಿತವು ಯುದ್ಧ ಮುಂದುವರಿಸುವುದಕ್ಕಿಂತ ಶಾಂತಿಯ ಕಡೆಗೆ ಆದ್ಯತೆ ನೀಡಿದರೆ ಉತ್ತಮ' ಎಂದಿದ್ದಾರೆ.
` ಊಟ ಮಾಡುವಾಗ ಪುಟಿನ್ ನಿಮ್ಮನ್ನು(ಟ್ರಂಪ್ರನ್ನು) ತಿಂದು ಬಿಡುತ್ತಾರೆ' ಎಂದು ಚುನಾವಣಾ ಪ್ರಚಾರದ ಸಂದರ್ಭ ಕಮಲಾ ಹ್ಯಾರಿಸ್ ನೀಡಿದ್ದ ಹೇಳಿಕೆಗೆ ಪ್ರತಿಕ್ರಿಯಿಸಿದ ಪೆಸ್ಕೋವ್ `ಪುಟಿನ್ ಮನುಷ್ಯರನ್ನು ತಿನ್ನುವುದಿಲ್ಲ' ಎಂದರು.
ಅಮೆರಿಕದ ಚುನಾಯಿತ ಅಧ್ಯಕ್ಷ ಟ್ರಂಪ್ ಎನ್ಬಿಸಿ ನ್ಯೂಸ್ಗೆ ನೀಡಿದ ಸಂದರ್ಶನದಲ್ಲಿ `ಉಕ್ರೇನ್ ಬಿಕ್ಕಟ್ಟಿಗೆ ಸಂಬಂಧಿಸಿ ಕೆಲವು ರೀತಿಯ ಮಾತುಕತೆಗೆ ತಾನು ಸಿದ್ಧವಾಗಿದ್ದೇನೆ' ಎಂದಿದ್ದರು.