ಷರತ್ತುಗಳಿಲ್ಲದೆ ಉಕ್ರೇನ್ ಜೊತೆ ಮಾತುಕತೆ ಮುಂದುವರಿಸಲು ಸಿದ್ಧ: ಪುಟಿನ್
ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ (PTI)
ಮಾಸ್ಕೋ: ಪೂರ್ವಭಾವಿ ಷರತ್ತುಗಳಿಲ್ಲದೆ ಉಕ್ರೇನ್ ಜೊತೆ ಮಾತುಕತೆ ನಡೆಸಲು ರಶ್ಯ ಸಿದ್ಧವಿದೆ ಎಂದು ಅಮೆರಿಕದ ರಾಯಭಾರಿ ಸ್ಟೀವ್ ವಿಟ್ಕಾಫ್ ಗೆ ಪುಟಿನ್ ತಿಳಿಸಿರುವುದಾಗಿ ರಶ್ಯ ಅಧ್ಯಕ್ಷರ ವಕ್ತಾರ ಡಿಮಿಟ್ರಿ ಪೆಸ್ಕೋವ್ ಹೇಳಿದ್ದಾರೆ.
ಟ್ರಂಪ್ ಅವರ ಪ್ರತಿನಿಧಿ ವಿಟ್ಕಾಫ್ ಜತೆಗಿನ ಮಾತುಕತೆಯ ಸಂದರ್ಭ ಯಾವುದೇ ಪೂರ್ವಭಾವಿ ಷರತ್ತುಗಳಿಲ್ಲದೆ ಉಕ್ರೇನ್ ಜೊತೆಗಿನ ಮಾತುಕತೆಯನ್ನು ಪುನರಾರಂಭಿಸಲು ರಶ್ಯ ಸಿದ್ಧ ಎಂದು ಪುಟಿನ್ ಪುನರುಚ್ಚರಿಸಿದ್ದಾರೆ. ಇದನ್ನು ಈ ಹಿಂದೆಯೂ ಹಲವು ಬಾರಿ ಪುಟಿನ್ ಪುನರುಚ್ಚರಿಸಿದ್ದಾರೆ ಎಂದು ಪೆಸ್ಕೋವ್ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ್ದಾರೆ.
ಈ ಮಧ್ಯೆ, ರೋಮ್ನಲ್ಲಿ ಪೋಪ್ ಫ್ರಾನ್ಸಿಸ್ ಅವರ ಅಂತ್ಯಸಂಸ್ಕಾರದಲ್ಲಿ ಪಾಲ್ಗೊಂಡಿದ್ದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಉಕ್ರೇನ್ ಅಧ್ಯಕ್ಷ ವೊಲೊದಿಮಿರ್ ಝೆಲೆನ್ಸ್ಕಿ ಉಕ್ರೇನ್ ಕದನ ವಿರಾಮದ ಬಗ್ಗೆ ಚರ್ಚೆ ನಡೆಸಿರುವುದಾಗಿ ವರದಿಯಾಗಿದೆ.
ಮಾತುಕತೆಯ ಬಳಿಕ ಟ್ರಂಪ್ `ಪುಟಿನ್ ಜತೆ ವಿಭಿನ್ನವಾಗಿ ವ್ಯವಹರಿಸಬೇಕಿದೆ. ಬ್ಯಾಂಕಿಂಗ್ ಅಥವಾ ಎರಡನೆಯ ಸುತ್ತಿನ ನಿರ್ಬಂಧಗಳ ಮೂಲಕ' ಎಂದು ತನ್ನ ಸಾಮಾಜಿಕ ಮಾಧ್ಯಮ `ಟ್ರುಥ್ ಸೋಷಿಯಲ್'ನಲ್ಲಿ ಪೋಸ್ಟ್ ಮಾಡಿದ್ದಾರೆ.