ರಷ್ಯಾದ ಅಧ್ಯಕ್ಷ ಚುನಾವಣೆಯಲ್ಲಿ ಅಭೂತಪೂರ್ವ ಗೆಲುವಿನ ಬೆನ್ನಲ್ಲೇ ಮೂರನೇ ಮಹಾಯುದ್ಧದ ಎಚ್ಚರಿಕೆ ನೀಡಿದ ಪುಟಿನ್
ವ್ಲಾದಿಮಿರ್ ಪುಟಿನ್ | Photo: NDTV
ಮಾಸ್ಕೊ: ರಶ್ಯ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಇನ್ನೊಂದು ಆರು ವರ್ಷಗಳ ಅವಧಿಗೆ ಅಧ್ಯಕ್ಷರಾಗಿ ಅಗಾಧ ಬಹುಮತದಿಂದ ಆಯ್ಕೆಯಾಗಿದ್ದಾರೆ ಎಂದು ಆ ದೇಶದ ಚುನಾವಣಾ ಆಯೋಗ ರವಿವಾರ ರಾತ್ರಿ ಘೋಷಿಸಿದೆ.
ಕೊನೆಯ ಹಂತದ ಮತದಾನ ರವಿವಾರ ಮುಕ್ತಾಯಗೊಳ್ಳುತ್ತಿದ್ದಂತೆಯೇ, ಆರಂಭಿಕ ಸುತ್ತಿನ ಮತ ಎಣಿಕೆಯ ಫಲಿತಾಂಶ ಹೊರಬಿದ್ದಿದೆ. ಎಲ್ಲರೂ ಊಹಿಸಿರುವಂತೆಯೇ, ಅವರು ತನ್ನ ಸುಮಾರು ಕಾಲು ಶತಮಾನ ಅವಧಿಯ ಆಳ್ವಿಕೆಯನ್ನು ಇನ್ನೊಂದು ಆರು ವರ್ಷಗಳ ಕಾಲ ಮುಂದುವರಿಸಲಿದ್ದಾರೆ.
ಸುಮಾರು 60 ಶೇಕಡ ಮತಗಳ ಎಣಿಕೆ ಮುಗಿದಾಗ, ರಶ್ಯದ ಬೇಹುಗಾರಿಕಾ ಸಂಸ್ಥೆ ಕೆಜಿಬಿಯ ಮಾಜಿ ಲೆಫ್ಟಿನೆಂಟ್ ಕರ್ನಲ್ ಪುಟಿನ್ ಸುಮಾರು 87 ಶೇಕಡ ಮತಗಳನ್ನು ಪಡೆದಿದ್ದಾರೆ ಎಂದು ರಶ್ಯದ ಚುನಾವಣಾ ಆಯೋಗ ಘೋಷಿಸಿದೆ.
ಈ ಫಲಿತಾಂಶದೊಂದಿಗೆ, 200 ವರ್ಷಗಳಿಗೂ ಅಧಿಕ ಅವಧಿಯಲ್ಲಿ ರಶ್ಯದ ದೀರ್ಘಾವಧಿ ಆಡಳಿತಗಾರನಾಗಿ ಜೋಸೆಫ್ ಸ್ಟಾಲಿನ್ರ ದಾಖಲೆಯನ್ನು 71 ವರ್ಷದ ಪುಟಿನ್ ಮುರಿಯಲಿದ್ದಾರೆ. ಅವರು 1999ರಲ್ಲಿ ಮೊದಲ ಬಾರಿಗೆ ಅಧಿಕಾರಕ್ಕೆ ಬಂದಿದ್ದರು.
ಕಮ್ಯುನಿಸ್ಟ್ ಅಭ್ಯರ್ಥಿ ನಿಕೊಲಾಯ್ ಖರಿಟೊನೊವ್ ನಾಲ್ಕು ಶೇಕಡ ಮತಗಳೊಂದಿಗೆ ಎರಡನೇ ಸ್ಥಾನದಲ್ಲಿದ್ದಾರೆ. ಮೂರನೇ ಸ್ಥಾನದಲ್ಲಿ ವ್ಲಾಡಿಸ್ಲಾವ್ ಡವನ್ಕೊವ್ ಮತ್ತು ನಾಲ್ಕನೇ ಸ್ಥಾನದಲ್ಲಿ ಅತಿ ರಾಷ್ಟ್ರೀಯವಾದಿ ಲಿಯೊನಿಡ್ ಸ್ಲಟ್ಸ್ಕಿ ಇದ್ದಾರೆ.
ಮತದಾನ ಮುಕ್ತಾಯಗೊಂಡಾಗ ರಾಷ್ಟ್ರವ್ಯಾಪಿ 74.22 ಶೇಕಡ ಮತಗಳ ಚಲಾವಣೆಯಾಗಿತ್ತು ಎಂದು ಚುನಾವಣಾ ಅಧಿಕಾರಿಗಳು ಘೋಷಿಸಿದ್ದಾರೆ. ಇದು 2018ರ 67.5 ಶೇಕಡ ಮತದಾನವನ್ನು ಮೀರಿಸಿದೆ.
ಚುನಾವಣೆಯಲ್ಲಿ ಪುಟಿನ್ ಗೆಲ್ಲುವ ಬಗ್ಗೆ ಯಾರಲ್ಲೂ ಯಾವುದೇ ಸಂದೇಹವಿರಲಿಲ್ಲ. ಯಾಕೆಂದರೆ ಅವರ ಟೀಕಾಕಾರರು ಜೈಲಿನಲ್ಲಿದ್ದಾರೆ, ದೇಶಭ್ರಷ್ಟರಾಗಿದ್ದಾರೆ ಅಥವಾ ಮೃತಪಟ್ಟಿದ್ದಾರೆ. ಸಾರ್ವಜನಿಕವಾಗಿ ತನ್ನನ್ನು ಟೀಕಿಸುವ ಯಾರನ್ನೂ ಪುಟಿನ್ ಬಿಟ್ಟಿಲ್ಲ.
ಪುಟಿನ್ರ ಬದ್ಧ ಎದುರಾಳಿ ಅಲೆಕ್ಸಿ ನವಾಲ್ನಿ ಕಳೆದ ತಿಂಗಳು ಆರ್ಕ್ಟಿಕ್ನ ಸೆರೆಮನೆಯೊಂದರಲ್ಲಿ ಅತ್ಯಂತ ಸಂಶಯಾಸ್ಪದ ಸನ್ನಿವೇಶಗಳಲ್ಲಿ ಮೃತಪಟ್ಟಿದ್ದಾರೆ.
ಪುಟಿನ್ರ ಈ ಗೆಲುವು ಪಾಶ್ಚಿಮಾತ್ಯ ದೇಶಗಳ ವಿರುದ್ಧ ಇನ್ನಷ್ಟು ಕಠಿಣ ನಿಲುವು ತಳೆಯುವುದಕ್ಕೆ ಪುಟಿನ್ಗೆ ಅವಕಾಶ ಮಾಡಿಕೊಡಲಿದೆ ಎಂದು ವೀಕ್ಷಕರು ಅಭಿಪ್ರಾಯಪಟ್ಟಿದ್ದಾರೆ. ಯುದ್ಧದಲ್ಲಾಗಲಿ, ಶಾಂತಿಯಲ್ಲಾಗಲಿ, ಮುಂದಿನ ಹಲವು ವರ್ಷಗಳ ಕಾಲ ಪಾಶ್ಚಿಮಾತ್ಯ ನಾಯಕರು ಪ್ರಬಲ ರಶ್ಯದೊಂದಿಗೆ ವ್ಯವಹರಿಸಬೇಕಾಗುತ್ತದೆ ಎಂಬ ಸಂದೇಶವನ್ನು ಈ ಫಲಿತಾಂಶ ನೀಡಿದೆ.
► ಚುನಾವಣೆ ಮುಕ್ತ, ನ್ಯಾಯೋಚಿತವಾಗಿರಲಿಲ್ಲ: ಅಮೆರಿಕ
ರಶ್ಯದ ಅಧ್ಯಕ್ಷೀಯ ಚುನಾವಣೆಯು ಮುಕ್ತವೂ ಆಗಿರಲಿಲ್ಲ, ನ್ಯಾಯೋಚಿತವೂ ಆಗಿರಲಿಲ್ಲ ಎಂದು ಅಮೆರಿಕ ಹೇಳಿದೆ.
“ಚುನಾವಣೆಯು ಮುಕ್ತವೂ ಆಗಿರಲಿಲ್ಲ, ನ್ಯಾಯೋಚಿತವೂ ಆಗಿರಲಿಲ್ಲ ಎನ್ನುವುದು ಸ್ಪಷ್ಟ. ಯಾಕೆಂದರೆ ಪುಟಿನ್ ತನ್ನ ರಾಜಕೀಯ ಎದುರಾಳಿಗಳನ್ನು ಜೈಲಿನಲ್ಲಿಟ್ಟಿದ್ದಾರೆ ಮತ್ತು ಕೆಲವರನ್ನು ತನ್ನ ವಿರುದ್ಧ ಸ್ಪರ್ಧಿಸದಂತೆ ತಡೆದಿದ್ದಾರೆ’’ ಎಂದು ಶ್ವೇತಭವನದ ರಾಷ್ಟ್ರೀಯ ಭದ್ರತಾ ಮಂಡಳಿಯ ವಕ್ತಾರರೊಬ್ಬರು ತಿಳಿಸಿದರು.
ಚುನಾವಣೆಯಲ್ಲಿ ಪುಟಿನ್ ಜಯ ಗಳಿಸಿದ್ದಾರೆ ಎಂಬ ಸುದ್ದಿಗೆ ಪ್ರತಿಕ್ರಿಯಿಸಿರುವ ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ, “ಈ ವಂಚನಾ ಚುನಾವಣೆಗೆ ಯಾವುದೇ ಮಾನ್ಯತೆಯಿಲ್ಲ’’ ಎಂದು ಅಭಿಪ್ರಾಯಪಟ್ಟಿದ್ದಾರೆ.
ಪುಟಿನ್ 2022 ಫೆಬ್ರವರಿಯಲ್ಲಿ ಉಕ್ರೇನ್ ಮೇಲೆ ಪೂರ್ಣ ಪ್ರಮಾಣದ ಯುದ್ಧ ಆರಂಭಿಸಿದ ಎರಡು ವರ್ಷಗಳ ಬಳಿಕ ಈ ಚುನಾವಣೆ ನಡೆದಿದೆ. ರಶ್ಯದ ಚುನಾವಣಾ ಫಲಿತಾಂಶಕ್ಕೆ ಪ್ರತಿಕ್ರಿಯಿಸಿರುವ ಬ್ರಿಟನ್ನ ವಿದೇಶಾಂಗ ಕಾರ್ಯದರ್ಶಿ ಡೇವಿಡ್ ಕ್ಯಾಮರೂನ್, “ರಶ್ಯದ ಚುನಾವಣೆಯು ಮುಕ್ತ ಮತ್ತು ನ್ಯಾಯೋಚಿತ ಚುನಾವಣೆ ಹೇಗಿರಬೇಕೋ ಹಾಗಿರಲಿಲ್ಲ’’ ಎಂಬುದಾಗಿ ಅವರು ಸೋಮವಾರ ಎಕ್ಸ್ನಲ್ಲಿ ಬರೆದಿದ್ದಾರೆ.
“ಪುಟಿನ್ ತನ್ನ ರಾಜಕೀಯ ಎದುರಾಳಿಗಳನ್ನು ಇಲ್ಲವಾಗಿಸುತ್ತಾರೆ, ಮಾಧ್ಯಮಗಳನ್ನು ನಿಯಂತ್ರಿಸುತ್ತಾರೆ ಮತ್ತು ತನ್ನನ್ನು ತಾನೇ ವಿಜಯಿ ಎಂದು ಘೋಷಿಸಿಕೊಳ್ಳುತ್ತಾರೆ. ಇದು ಪ್ರಜಾಪ್ರಭುತ್ವವಲ್ಲ’’ ಎಂದು ಅವರು ಹೇಳಿದ್ದಾರೆ. ರಶ್ಯದ ಚುನಾವಣೆಯ ಫಲಿತಾಂಶವು “ಅಧ್ಯಕ್ಷ ವ್ಲಾದಿಮಿರ್ ಪುಟಿನ್ರ ಆಳ್ವಿಕೆಯಲ್ಲಿ ರಶ್ಯದಲ್ಲಿ ನಡೆಯುತ್ತಿರುವ ದಮನದ ಮಟ್ಟವನ್ನು’’ ಎತ್ತಿತೋರಿಸುತ್ತದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
► ಫಲಿತಾಂಶದ ವಿರುದ್ಧ ಸಾವಿರಾರು ಜನರ ಪ್ರತಿಭಟನೆ
ಚುನಾವಣಾ ಫಲಿತಾಂಶವನ್ನು ಚುನಾವಣಾ ಆಯೋಗವು ಪ್ರಕಟಿಸುತ್ತಿದ್ದಂತೆಯೇ, ರಶ್ಯದಲ್ಲಿ ಸಾವಿರಾರು ಮಂದಿ ಪುಟಿನ್ ವಿರುದ್ಧ ಪ್ರತಿಭಟನೆ ನಡೆಸಿದರು. “ಪುಟಿನ್ ವಿರುದ್ಧ ಮಧ್ಯಾಹ್ನದ ಪ್ರತಿಭಟನೆ’’ಗಾಗಿ ಹೊರಬರುವಂತೆ ದಿವಂಗತ ಪ್ರತಿಪಕ್ಷ ನಾಯಕ ಅಲೆಕ್ಸಿ ನವಾಲ್ನಿಯ ಬೆಂಬಲಿಗರು ರಶ್ಯನ್ನರಿಗೆ ಕರೆ ನೀಡಿದ್ದರು.
► 25 ವರ್ಷಗಳ ಕಾಲ ನಿರಂತರ ಜಯಗಳ ಸರದಾರ
1999 ಡಿಸೆಂಬರ್ 31ರಂದು ರಶ್ಯದ ಅಂದಿನ ಅಧ್ಯಕ್ಷ ಬೋರಿಸ್ ಯೆಲ್ಸಿನ್ ರಾಜೀನಾಮೆ ನೀಡಿದಾಗ, ಆಗ ಪ್ರಧಾನಿಯಾಗಿದ್ದ ವ್ಲಾದಿಮಿರ್ ಪುಟಿನ್ರನ್ನು ಉಸ್ತುವಾರಿ ಅಧ್ಯಕ್ಷರಾಗಿ ಮೊದಲ ಬಾರಿಗೆ ನೇಮಿಸಲಾಗಿತ್ತು. 2000 ಮಾರ್ಚ್ನಲ್ಲಿ ನಡೆದ ಅಧ್ಯಕ್ಷೀಯ ಚುನಾವಣೆಯಲ್ಲಿ ಅವರು ಮೊದಲ ಬಾರಿಗೆ ಜಯ ಗಳಿಸಿದರು. 2004ರಲ್ಲಿ ಅವರು ಅಧ್ಯಕ್ಷರಾಗಿ ಪುನರಾಯ್ಕೆಗೊಂಡರು.
ಎರಡು ಬಾರಿಗೆ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ ಬಳಿಕ, ಪುಟಿನ್ 2008ರಲ್ಲಿ ಪ್ರಧಾನಿ ಹುದ್ದೆಗೆ ಮರಳಿದರು. ಒಬ್ಬ ವ್ಯಕ್ತಿಯು ರಶ್ಯದ ಅಧ್ಯಕ್ಷರಾಗಿ ಸತತ ಎರಡು ಅವಧಿಗಳಿಗಿಂತ ಹೆಚ್ಚು ಅವಧಿಗೆ ಸ್ಪರ್ಧಿಸಬಾರದು ಎಂಬ ಸಾಂವಿಧಾನಿಕ ತಡೆಯನ್ನು ನಿವಾರಿಸುವುದಕ್ಕಾಗಿ ಅವರು ಹಾಗೆ ಮಾಡಿದ್ದರು.
ಆದರೆ, 2012ರಲ್ಲಿ ಅವರು ಮತ್ತೆ ಅಧ್ಯಕ್ಷ ಹುದ್ದೆಗೆ ಮರಳಿದರು. ಬಳಿಕ, 2018ರಲ್ಲಿ ನಾಲ್ಕನೇ ಅವಧಿಗೆ ಅಧ್ಯಕ್ಷರಾದರು.
► ನಮ್ಮ ಸಂಕಲ್ಪವನ್ನು ಹತ್ತಿಕ್ಕಲು ಯಾರಿಗೂ ಸಾಧ್ಯವಿಲ್ಲ: ಗೆಲುವು ಘೋಷಣೆಯ ಬಳಿಕ ಪುಟಿನ್ ಭಾಷಣ
“ಯಾರೇ ಆಗಿರಲಿ, ಅವರು ನಮ್ಮನ್ನು ಎಷ್ಟೇ ಬೆದರಿಸಲು ಬಯಸಲಿ, ನಮ್ಮನ್ನು, ನಮ್ಮ ಸಂಕಲ್ಪವನ್ನು, ನಮ್ಮ ಪ್ರಜ್ಞೆಯನ್ನು ಎಷ್ಟೇ ಹತ್ತಿಕ್ಕಲು ಬಯಸಲಿ- ಇತಿಹಾಸದಲ್ಲಿ ಇಂಥ ಯಾವುದರಲ್ಲೂ ಯಾರೂ ಯಶಸ್ವಿಯಾದ ಉದಾಹರಣೆಯಿಲ್ಲ’’ ಎಂದು ಸೋಮವಾರ ಬೆಳಗ್ಗೆ ತನ್ನ ಚುನಾವಣಾ ಪ್ರಚಾರದ ಮುಖ್ಯ ಕಚೇರಿಯಿಂದ ಮಾಡಿದ ಭಾಷಣದಲ್ಲಿ ವ್ಲಾಡಿಮಿರ್ ಪುಟಿನ್ ಹೇಳಿದ್ದಾರೆ.
“ಅದು ಈಗಲೂ ಯಶಸ್ವಿಯಾಗಿಲ್ಲ, ಮುಂದೆಯೂ ಯಶಸ್ವಿಯಾಗುವುದಿಲ್ಲ, ಯಾವತ್ತೂ ಯಶಸ್ವಿಯಾಗುವುದಿಲ್ಲ’’ ಎಂದರು.
► “ಅಂಥಾದ್ದೆಲ್ಲ ಆಗುತ್ತದೆ. ನಾವು ಮಾಡುವುದು ಏನೂ ಇಲ್ಲ”: ನವಾಲ್ನಿ ಸಾವಿಗೆ ಮೊದಲ ಬಾರಿ ಪ್ರತಿಕ್ರಿಯಿಸಿದ ಪುಟಿನ್
ರಶ್ಯದ ಪ್ರತಿಪಕ್ಷ ನಾಯಕ ಹಾಗೂ ತನ್ನ ಅತಿ ದೊಡ್ಡ ರಾಜಕೀಯ ಶತ್ರು ಅಲೆಕ್ಸಿ ನವಾಲ್ನಿಯ ಸಾವಿನ ಬಗ್ಗೆ ವ್ಲಾದಿಮಿರ್ ಪುಟಿನ್ ಸೋಮವಾರ ತನ್ನ ಮೊದಲ ಪ್ರತಿಕ್ರಿಯೆಯನ್ನು ನೀಡಿದ್ದಾರೆ. ನವಾಲ್ನಿ ಸಾಯುವ ಕೆಲವೇ ದಿನಗಳ ಮೊದಲು, ಕೈದಿಗಳ ಬಿಡುಗಡೆಗಾಗಿ ಅವರನ್ನು ಬಿಡುಗಡೆಗೊಳಿಸುವ ಪ್ರಸ್ತಾವವೊಂದನ್ನು ತಾನು ಬೆಂಬಲಿಸಿದ್ದೆ ಎಂದು ಪುಟಿನ್ ಹೇಳಿದ್ದಾರೆ.
ಅವರ ಸಾವಿನ ಬಗ್ಗೆ ಪ್ರತಿಕ್ರಿಯಿಸಿದ ಪುಟಿನ್, “ಅಂಥಾದ್ದೆಲ್ಲ ಆಗುತ್ತದೆ. ಅದರ ಬಗ್ಗೆ ನಾವು ಮಾಡುವುದು ಏನೂ ಇಲ್ಲ. ಇದುವೇ ಜೀವನ’’ ಎಂದು ಹೇಳಿದ್ದಾರೆ. ಹಲವು ವರ್ಷಗಳ ಅವಧಿಯಲ್ಲಿ ಅವರು ನವಾಲ್ನಿಯನ್ನು ಅವರ ಹೆಸರಿನಿಂದ ಉಲ್ಲೇಖಿಸಿರುವುದು ಇದೇ ಮೊದಲು. ಚುನಾವಣಾ ಫಲಿತಾಂಶವು ಪುಟಿನ್ರ ಆಳ್ವಿಕೆಯನ್ನು ಮತ್ತೆ ಆರು ವರ್ಷಗಳ ಕಾಲ ಭದ್ರಪಡಿಸಿದ ಬಳಿಕ ಸೋಮವಾರ ಮುಂಜಾನೆ ಕರೆದ ಪತ್ರಿಕಾಗೋಷ್ಠಿಯಲ್ಲಿ ಅವರು ಈ ಮಾತುಗಳನ್ನು ಆಡಿದ್ದಾರೆ.