ರಶ್ಯ ಅಧ್ಯಕ್ಷ ಸ್ಥಾನಕ್ಕೆ ಮತ್ತೆ ಸ್ಪರ್ಧಿಸಲು ಪುಟಿನ್ ನಿರ್ಧಾರ
Photo- PTI
ಮಾಸ್ಕೊ: ಮಾರ್ಚ್ನಲ್ಲಿ ನಡೆಯಲಿರುವ ಅಧ್ಯಕ್ಷೀಯ ಚುನಾವಣೆಯಲ್ಲಿ ಸ್ಫರ್ಧಿಸಲು ನಿರ್ಧರಿಸಿರುವುದಾಗಿ ರಶ್ಯ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಘೋಷಿಸಿದ್ದು ಈ ಮೂಲಕ 2030ರವರೆಗೂ ಅಧ್ಯಕ್ಷ ಹುದ್ದೆಯಲ್ಲಿ ಮುಂದುವರಿಯುವ ಇರಾದೆ ವ್ಯಕ್ತಪಡಿಸಿದ್ದಾರೆ ಎಂದು `ರಾಯ್ಟರ್ಸ್' ವರದಿ ಮಾಡಿದೆ.
1999ರ ಡಿಸೆಂಬರ್ 31ರಂದು ಬೋರಿಸ್ ಯೆಲ್ಸ್ಟಿನ್ರಿಂದ ಅಧ್ಯಕ್ಷ ಹುದ್ದೆ ಸ್ವೀಕರಿಸಿದ ಪುಟಿನ್, ರಶ್ಯದಲ್ಲಿ ದೀರ್ಘಾವಧಿಯಲ್ಲಿ ಅಧಿಕಾರದಲ್ಲಿದ್ದ ಅಧ್ಯಕ್ಷ ಎಂಬ ದಾಖಲೆಗೆ ಪಾತ್ರವಾಗಿದ್ದಾರೆ. 71 ವರ್ಷದ ಪುಟಿನ್ ಅನಾರೋಗ್ಯದ ಬಗ್ಗೆ ಹರಡಿರುವ ವದಂತಿಯನ್ನು ನಿರಾಕರಿಸಿರುವ ಅಧ್ಯಕ್ಷರ ಕಚೇರಿ, 2024ರ ಮಾರ್ಚ್ನಲ್ಲಿ ನಡೆಯಲಿರುವ ಚುನಾವಣೆಯಲ್ಲಿ ಪುಟಿನ್ ಮರು ಸ್ಪರ್ಧಿಸಲಿದ್ದು ಚುನಾವಣಾ ಪ್ರಚಾರಕಾರ್ಯದ ಬಗ್ಗೆ ಈಗಲೇ ಸಿದ್ಧತೆ ನಡೆಸಲಾಗುವುದು ಎಂದು ಹೇಳಿದೆ.
ಪುಟಿನ್ ಮತ್ತೊಮ್ಮೆ ಸ್ಪರ್ಧಿಸುವುದನ್ನು ಜೈಲಿನಲ್ಲಿರುವ ವಿಪಕ್ಷ ಮುಖಂಡ ಅಲೆಕ್ಸೆಯ್ ನವಾಲ್ನಿ ಟೀಕಿಸಿದ್ದು ಪುಟಿನ್ ಭ್ರಷ್ಟ ಆಡಳಿತ ವ್ಯವಸ್ಥೆಯನ್ನು ನಿರ್ಮಿಸುವ ಮೂಲಕ ರಶ್ಯವನ್ನು ವಿನಾಶದ ಅಂಚಿನತ್ತ ಕೊಂಡೊಯ್ದಿದ್ದಾರೆ ಎಂದಿದ್ದಾರೆ.