ಪುಟಿನ್ ಮಾಜಿ ಸಲಹೆಗಾರ ‘ವಿದೇಶಿ ಏಜೆಂಟರ’ ಪಟ್ಟಿಗೆ ಸೇರ್ಪಡೆ
Photo courtesy : twitter/firstpost
ಮಾಸ್ಕೊ: ರಶ್ಯ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಅವರ ಮಾಜಿ ಆರ್ಥಿಕ ಸಲಹೆಗಾರ ಆಂಡ್ರೆಯ್ ಇಲಾರಿಯೊನೊವ್ ಅವರ ಹೆಸರನ್ನು `ವಿದೇಶಿ ಏಜೆಂಟರ ನೋಂದಣಿ'ಗೆ ಸೇರಿಸಲಾಗಿದೆ ಎಂದು ರಶ್ಯದ ನ್ಯಾಯಾಂಗ ಇಲಾಖೆ ಹೇಳಿದೆ.
ರಶ್ಯದ ಪುಟಿನ್ ಆಡಳಿತ ಸರಕಾರದ ವಿರೋಧಿಗಳನ್ನು `ವಿದೇಶಿ ಏಜೆಂಟರ ನೋಂದಣಿ' ಪಟ್ಟಿಯಲ್ಲಿ ಸೇರಿಸುತ್ತದೆ. ಈ ಪಟ್ಟಿಗೆ ಸೇರ್ಪಡೆಗೊಂಡವರ ಚಲನವಲನದ ಮೇಲೆ ಸರಕಾರ ನಿಗಾ ಇರಿಸುತ್ತದೆ. ಇವರು ತಮ್ಮ ಆದಾಯ, ವೆಚ್ಚದ ಮೂಲ, ಚಟುವಟಿಕೆಯ ವ್ಯಾಪ್ತಿಯ ಬಗ್ಗೆ ಸರಕಾರಕ್ಕೆ ಮಾಹಿತಿ ನೀಡಬೇಕಾಗುತ್ತದೆ. 2005ರಲ್ಲಿ ತಮ್ಮ ಹುದ್ದೆಗೆ ರಾಜೀನಾಮೆ ನೀಡಿ ಅಮೆರಿಕಕ್ಕೆ ತೆರಳಿದ್ದ ಇಲಾರಿಯೊನೊವ್ ಉಕ್ರೇನ್ ಮೇಲಿನ ರಶ್ಯದ ಆಕ್ರಮಣವನ್ನು ಟೀಕಿಸುತ್ತಿದ್ದಾರೆ ಮತ್ತು ರಶ್ಯ ಆಡಳಿತದ ಇತ್ತೀಚಿನ ಕಾರ್ಯನೀತಿ ಆ ದೇಶವನ್ನು ದುರಂತದ ಅಂಚಿಗೆ ತಳ್ಳುತ್ತಿದೆ ಎಂದು ಹೇಳಿಕೆ ನೀಡಿದ್ದಾರೆ.
ಇಲಾರಿಯೊನೊವ್ ರಶ್ಯದ ಆಡಳಿತ, ಅಧಿಕಾರಿಗಳು ಹಾಗೂ ಅವರ ನಿರ್ಧಾರಗಳ ಬಗ್ಗೆ ತಪ್ಪು ಮಾಹಿತಿಯನ್ನು ಪ್ರಸಾರ ಮಾಡುತ್ತಿದ್ದಾರೆ ಎಂದು ನ್ಯಾಯಾಂಗ ಇಲಾಖೆ ಹೇಳಿದೆ.