ಇಸ್ರೇಲ್-ಹಮಾಸ್ ಕದನ ವಿರಾಮದ ಕುರಿತ ಮಾತುಕತೆಗೆ ಖತರ್ ಆತಿಥ್ಯ
Photo: PTI
ಕೈರೊ, ಫೆ.25: ಗಾಝಾದಲ್ಲಿ ಕದನ ವಿರಾಮದ ಕುರಿತು ಖತರ್ ರಾಜಧಾನಿ ದೋಹಾದಲ್ಲಿ ಮಾತುಕತೆ ಪುನರಾರಂಭಗೊಂಡಿದ್ದು ಈಜಿಪ್ಟ್, ಖತರ್, ಅಮೆರಿಕ, ಇಸ್ರೇಲ್ ಹಾಗೂ ಹಮಾಸ್ನ ಪ್ರತಿನಿಧಿಗಳು ಪಾಲ್ಗೊಂಡಿದ್ದಾರೆ ಎಂದು ಈಜಿಪ್ಟ್ ನ ಮಾಧ್ಯಮಗಳು ವರದಿ ಮಾಡಿವೆ.
ಶುಕ್ರವಾರ ಇಸ್ರೇಲ್ನ ಗುಪ್ತಚರ ವಿಭಾಗ `ಮೊಸಾದ್'ನ ಮುಖ್ಯಸ್ಥ ಡೇವಿಡ್ ಬಾರ್ನೆಯಾ ನೇತೃತ್ವದ ಇಸ್ರೇಲ್ ನಿಯೋಗ ಫ್ರಾನ್ಸ್ ನ ಪ್ಯಾರಿಸ್ನಲ್ಲಿ ನಡೆದ ಸಭೆಯಲ್ಲಿ ಪಾಲ್ಗೊಂಡಿದ್ದು ಗಾಝಾದಲ್ಲಿ ಹಮಾಸ್ ಒತ್ತೆಸೆರೆಯಲ್ಲಿರುವವರ ಬಿಡುಗಡೆಗೆ ಪ್ರತಿಯಾಗಿ ಇಸ್ರೇಲ್ನಲ್ಲಿ ಬಂಧನದಲ್ಲಿರುವ ಫೆಲೆಸ್ತೀನಿಯನ್ ಕೈದಿಗಳ ಬಿಡುಗಡೆಯ ಬಗ್ಗೆ ಚರ್ಚಿಸಿದ್ದಾರೆ. ಜತೆಗೆ, ಶನಿವಾರ ಇಸ್ರೇಲ್ನ ಯುದ್ಧಕಾಲದ ಸಂಪುಟ ಸಭೆಯಲ್ಲಿ ಖತರ್ ನಲ್ಲಿ ನಡೆಯುವ ಸಂಧಾನ ಮಾತುಕತೆಗೆ ನಿಯೋಗ ರವಾನಿಸಲು ನಿರ್ಧರಿಸಲಾಗಿದೆ ಎಂದು ಇಸ್ರೇಲ್ನ ಮಾಧ್ಯಮಗಳು ವರದಿ ಮಾಡಿವೆ. ಪ್ಯಾರಿಸ್ನಲ್ಲಿ ಚರ್ಚಿಸಲಾದ ವಿಷಯಗಳನ್ನು ಖತರ್ನಲ್ಲಿ ನಡೆಯುವ ಮಾತುಕತೆಯಲ್ಲಿ ಮುಂದುವರಿಸಲಾಗುವುದು. ಆ ಬಳಿಕ ಈಜಿಪ್ಟ್ನ ಕೈರೋದಲ್ಲಿ ಮತ್ತೊಂದು ಹಂತದ ಸಭೆ ನಡೆಯಲಿದೆ ಎಂದು ಈಜಿಪ್ಟ್ನ ಅಲ್-ಖಹೆರಾ ನ್ಯೂಸ್ ವರದಿ ಮಾಡಿದೆ.