ಗಾಝಾ ಕದನವಿರಾಮ ಮಾತುಕತೆ ಸ್ಥಗಿತಗೊಳಿಸಿದ ಖತರ್ : ಮಾತುಕತೆಯಲ್ಲಿ ಪ್ರಗತಿಯಾಗದೆ ಇರುವುದಕ್ಕೆ ಅಸಮಾಧಾನ
PC : qatariscoop.
ದೋಹಾ : ಗಾಝಾದಲ್ಲಿ ಕದನವಿರಾಮವನ್ನು ಏರ್ಪಡಿಸುವ ನಿಟ್ಟಿನಲ್ಲಿ ಹಮಾಸ್ ಹಾಗೂ ಇಸ್ರೇಲ್ ಜೊತೆ ತಾನು ನಡೆಸುತ್ತಿರುವ ಸಂಧಾನ ಮಾತುಕತೆಯನ್ನು ಸ್ಥಗಿತಗೊಳಿಸಿರುವುದಾಗಿ ಖತರ್ ರವಿವಾರ ಘೋಷಿಸಿದೆ.
ಮಾತುಕತೆಯಲ್ಲಿ ಪ್ರಗತಿಯಾಗದೆ ಇರುವ ಹಿನ್ನೆಲೆಯಲ್ಲಿ ಈ ನಿರ್ಧಾರಕ್ಕೆ ಬಂದಿರುವುದಾಗಿ ಅದು ಹೇಳಿದೆ. ಆದರೆ ಖತರ್ ನ ಅತಿಥ್ಯದಲ್ಲಿರುವ ಹಮಾಸ್ ನಾಯಕರನ್ನು ದೇಶ ತೊರೆಯುವಂತೆ ಸೂಚಿಸಲಾಗುವುದೇ ಎಂಬುದು ಸ್ಪಷ್ಟವಾಗಿಲ್ಲ. ಹಮಾಸ್ ನಾಯಕರು ಇರಾನ್ ಹಾಗೂ ಟರ್ಕಿ ಜೊತೆ ಉತ್ತಮ ಬಾಂಧವ್ಯವನ್ನು ಹೊಂದಿದ್ದು, ಅದರ ಕೆಲವು ನಾಯಕರು ಈಗ ಲೆಬನಾನ್ ನಲ್ಲಿದ್ದಾರೆ.
ಆದರೆ ಒಂದು ವೇಳೆ ಕದನ ವಿರಾಮ ಒಪ್ಪಂದವನ್ನು ಏರ್ಪಡಿಸಲು ಇಸ್ರೇಲ್ ಹಾಗೂ ಹಮಾಸ್ ರಾಜಕೀಯ ಇಚ್ಛಾಶಕ್ತಿಯನ್ನು ಪ್ರದರ್ಶಿಸಿದಲ್ಲಿ ಖತರ್ ಮತ್ತೆ ಮಾತುಕತೆಗೆ ಮಧ್ಯಸ್ಥಿಕೆ ವಹಿಸುವ ಸಾಧ್ಯತೆ ಇದೆ ಎಂದು ಇನ್ನೋರ್ವ ಪ್ರಮುಖ ಸಂಧಾನಕಾರ ರಾಷ್ಟ್ರವಾದ ಈಜಿಪ್ಟ್ನ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಉತ್ತಮ ನಂಬಿಕೆಯೊಂದಿಗೆ ಒಪ್ಪಂದವನ್ನು ಏರ್ಪಡಿಸಲು ಇತ್ತಂಡಗಳೂ ಇಚ್ಚೆ ವ್ಯಕ್ತಪಡಿಸದೆ ಇರುವವರೆಗೆ ತಾನು ಮಧ್ಯಸ್ಥಿಕೆ ವಹಿಸುವುದನ್ನು ಮುಂದುವರಿಸಲು ಸಾಧ್ಯವಿಲ್ಲವೆಂದು ಖತರ್ ದೇಶವು ಇಸ್ರೇಲ್ ಹಾಗೂ ಹಮಾಸ್ ಗೆ ಸ್ಪಷ್ಟಪಡಿಸಿದೆಯೆನ್ನಲಾಗಿದೆ. ಅಲ್ಲದೆ ಖತರ್ನಲ್ಲಿ ಕಾರ್ಯಾಚರಿಸುತ್ತಿರುವ ಹಮಾಸ್ ನ ರಾಜತಾಂತ್ರಿಕ ಕಚೇರಿಯು, ಅದರ ಉದ್ದೇಶವನ್ನು ಈಡೇರಿಸುತ್ತಿಲ್ಲವೆಂದು ಖತರ್ ನ ರಾಜತಾಂತ್ರಿಕ ಮೂಲಗಳು ತಿಳಿಸಿವೆ. ಗಂಭೀರವಾದ ಮಾತುಕತೆಗಳನ್ನು ನಡೆಸಲು ಹಮಾಸ್ ಸಿದ್ದವಿಲ್ಲದೆ ಇದ್ದಲ್ಲಿ, ರಾಜತಾಂತ್ರಿಕ ನಿಯೋಗವು ಅಲ್ಲಿಂದ ತೆರಳುವಂತೆಯೂ ಸೂಚಿಸುವ ಸಾಧ್ಯತೆಯಿದೆಯೆಂದು ಮೂಲಗಳು ತಿಳಿಸಿವೆ.
ಖತರ್ ರಾಜಧಾನಿ ದೋಹಾದಲ್ಲಿರುವ ಹಮಾಸ್ ರಾಜತಾಂತ್ರಿಕ ಕಚೇರಿಯು ಉಪಯುಕ್ತವಾಗಿರದೆ ಇರುವುದರಿಂದ, ಅಲ್ಲಿರುವ ಹಮಾಸ್ ನಿಯೋಗವನ್ನು ಉಚ್ಚಾಟಿಸುವಂತೆ ಅಮೆರಿಕವು ಮನವಿ ಮಾಡಿರುವುದಾಗಿ ಹಿರಿಯ ಅಮೆರಿಕನ್ ಅಧಿಕಾರಿಯೊಬ್ಬರು ಸುದ್ದಿಸಂಸ್ತೆಗಳಿಗೆ ಮಾಹಿತಿ ನೀಡಿದ್ದಾರೆ. ಕದನವಿರಾಮ ಏರ್ಪಡಿಸುವ ಕುರಿತಾಗಿ ಕೊನೆಯ ಪ್ರಸ್ತಾಪವನ್ನು ಹಮಾಸ್ ತಿರಸ್ಕರಿಸಿದ ಬಳಿಕ ಅಮೆರಿಕವು ಕತರ್ಗೆ ಈ ಸಲಹೆಯನ್ನು ನೀಡಿದೆಯೆನ್ನಲಾಗಿದೆ.