ದೋಹಾ ತೊರೆಯುವಂತೆ ಹಮಾಸ್ಗೆ ಖತರ್ ಸೂಚನೆ: ವರದಿ
PC : qatariscoop.
ದೋಹಾ: ಅಮೆರಿಕದ ಕೋರಿಕೆಯ ಹಿನ್ನೆಲೆಯಲ್ಲಿ ಹಮಾಸ್ ಅನ್ನು ದೇಶದಿಂದ ಹೊರಗೆ ಕಳುಹಿಸಲು ಖತರ್ ಒಪ್ಪಿಕೊಂಡಿದೆ ಎಂದು ಅಮೆರಿಕ ಮತ್ತು ಖತರ್ ನ ಉನ್ನತ ಮೂಲಗಳನ್ನು ಉಲ್ಲೇಖಿಸಿ ಸಿಎನ್ಎನ್ ವರದಿ ಮಾಡಿದೆ.
ಹಮಾಸ್ನ ಉನ್ನತ ನಾಯಕರು ಖತರ್ ರಾಜಧಾನಿ ದೋಹಾದಲ್ಲಿ ನೆಲೆಸಿದ್ದಾರೆ. ಇಸ್ರೇಲ್-ಹಮಾಸ್ ಯುದ್ಧದಲ್ಲಿ ಕದನ ವಿರಾಮ ಮತ್ತು ಒತ್ತೆಯಾಳು ಬಿಡುಗಡೆ ಒಪ್ಪಂದಕ್ಕೆ ಹಮಾಸ್ ಮುಖಂಡರನ್ನು ಒಪ್ಪಿಸುವ ಪ್ರಯತ್ನ ವಿಫಲಗೊಂಡಿರುವ ಹಿನ್ನೆಲೆಯಲ್ಲಿ ಹಮಾಸ್ ಸದಸ್ಯರಿಗೆ ದೋಹಾದಲ್ಲಿ ಆಶ್ರಯ ಒದಗಿಸಬಾರದು ಎಂದು 2 ವಾರಗಳ ಹಿಂದೆ ಅಮೆರಿಕ ಆಡಳಿತ ಖತರ್ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದರು ಎಂದು ಮೂಲಗಳು ಹೇಳಿವೆ.
`ಹಮಾಸ್ ಅಮೆರಿಕನ್ನರನ್ನು ಒತ್ತೆಯಾಳಾಗಿ ಇರಿಸಿಕೊಂಡಿದೆ. ಒತ್ತೆಯಾಳುಗಳ ಬಿಡುಗಡೆ ಮಾಡುವ ಪುನರಾವರ್ತಿತ ಪ್ರಸ್ತಾಪಗಳನ್ನು ತಿರಸ್ಕರಿಸಿದ ನಂತರ, ಅದರ ನಾಯಕರನ್ನು ಇನ್ನು ಮುಂದೆ ಯಾವುದೇ ಅಮೆರಿಕನ್ ಪಾಲುದಾರರ ದೇಶಗಳ ರಾಜಧಾನಿಯಲ್ಲಿ ಸ್ವಾಗತಿಸಬಾರದು' ಎಂದು ಅಮೆರಿಕದ ಉನ್ನತ ಅಧಿಕಾರಿಯನ್ನು ಉಲ್ಲೇಖಿಸಿ ಸಿಎನ್ಎನ್ ವರದಿ ಮಾಡಿದೆ. ಇಸ್ರೇಲ್-ಹಮಾಸ್ ನಡುವಿನ ಕದನ ವಿರಾಮ ಮಾತುಕತೆಯಲ್ಲಿ ಖತರ್ ಪ್ರಮುಖ ಪಾತ್ರ ನಿರ್ವಹಿಸುತ್ತಿದೆ. ಗಾಝಾದಲ್ಲಿ ಕದನ ವಿರಾಮ ಒಪ್ಪಂದದ ಪ್ರಸ್ತಾಪವನ್ನು ಒಪ್ಪಿಕೊಳ್ಳದಿದ್ದರೆ ಹಮಾಸ್ ಸದಸ್ಯರನ್ನು ದೋಹಾದಿಂದ ಹೊರಗಟ್ಟಲಾಗುವುದು ಎಂದು ಎಚ್ಚರಿಕೆ ನೀಡುವಂತೆ ಎರಡು ತಿಂಗಳ ಹಿಂದೆ ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಆಂಟನಿ ಬ್ಲಿಂಕೆನ್ ಖತರ್ ಗೆ ಸಲಹೆ ನೀಡಿದ್ದರು ಎಂದು ವರದಿಯಾಗಿದೆ.