ಕ್ವಾಡ್ ಅಸ್ತಿತ್ವ: ಮೋದಿ ಭುಜದ ಮೇಲೆ ಕೈ ಇರಿಸಿ ಬೈಡನ್ ಹೇಳಿದ್ದೇನು?
PC: x.com/narendramodi
ವಾಷಿಂಗ್ಟನ್: ಅಮೆರಿಕ ಅಧ್ಯಕ್ಷೀಯ ಚುನಾವಣೆ ನಡೆಯುವ ನವೆಂಬರ್ ಬಳಿಕ ಕೂಡಾ ಕ್ವಾಡ್ ಮೈತ್ರಿಕೂಟದ ಅಸ್ತಿತ್ವ ಮುಂದುವರಿಯಲಿವೆ ಎಂದು ಅಮೆರಿಕ ಅಧ್ಯಕ್ಷ ಜೋ ಬೈಡನ್ ಸ್ಪಷ್ಟಪಡಿಸಿದ್ದಾರೆ. ಭಾರತದ ಪ್ರಧಾನಿ ನರೇಂದ್ರ ಮೋದಿಯವರ ಭುಜದ ಮೇಲೆ ಕೈ ಇರಿಸಿ, ಕ್ವಾಡ್ ಭವಿಷ್ಯದ ಬಗೆಗಿನ ಆತಂಕದ ಬಗ್ಗೆ ಅವರು ಉತ್ತರಿಸಿದರು.
ಅಮೆರಿಕದ ಅಧ್ಯಕ್ಷೀಯ ಚುನಾವಣೆ ನವೆಂಬರ್ 5ರಂದು ನಡೆಯಲಿದ್ದು, ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ ಅವರು ಡೆಮಾಕ್ರಟಿಕ್ ಪಕ್ಷದ ಅಭ್ಯರ್ಥಿಯಾಗಿ ಬೈಡನ್ ಅವರಿಂದ ತೆರವಾಗುವ ಸ್ಥಾನ ತುಂಬುವ ನಿರೀಕ್ಷೆಯಲ್ಲಿದ್ದಾರೆ. ಹ್ಯಾರಿಸ್ ಅವರು ಅಮೆರಿಕದ ಮಾಜಿ ಅಧ್ಯಕ್ಷ ಹಾಗೂ ರಿಪಬ್ಲಿಕನ್ ಪಕ್ಷದ ಅಭ್ಯರ್ಥಿ ಡೊನಾಲ್ಡ್ ಟ್ರಂಪ್ ವಿರುದ್ಧ ಸೆಣೆಸುತ್ತಿದ್ದಾರೆ.
ಬೈಡನ್ ಶನಿವಾರ ಭಾರತದ ಪ್ರಧಾನಿ ನರೇಂದ್ರ ಮೋದಿ, ಆಸ್ಟ್ರೇಲಿಯಾ ಪ್ರಧಾನಿ ಆಂಟೋನಿ ಅಲ್ಬಾನೀಸ್ ಮತ್ತು ಜಪಾನ್ ಪ್ರಧಾನಿ ಫ್ಯೂಮಿಯೊ ಕಿಶಿದಾ ಜತೆ ಚತುಷ್ಪಕ್ಷೀಯ ಸಭೆಯನ್ನು ನಡೆಸಿದರು.
ಅಮೆರಿಕ ಈ ಬಾರಿಯ ಶೃಂಗಸಭೆ ಆಯೋಜಿಸಲು ಕೋರಿತ್ತು. ಆದರೆ ನಾಯಕರ ವೇಳಾಪಟ್ಟಿಯ ಸಂಘರ್ಷದ ಕಾರಣದಿಂದ ಮುಂದಿನ ಕ್ವಾಡ್ ಶೃಂಗವನ್ನು 2025ರಲ್ಲಿ ಆಯೋಜಿಸಲು ಭಾರತ ಒಪ್ಪಿಕೊಂಡಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ಸ್ಪಷ್ಟಪಡಿಸಿದೆ.
ಕ್ವಾಡ್ ಪಾಲುದಾರ ದೇಶಗಳಿಗೆ ತಮ್ಮ ಜಲಪ್ರದೇಶಗಳ ಮೇಲೆ ಸೂಕ್ತ ನಿಗಾ ಇರಿಸಲು ಹೊಸ ಸಾಗರ ತಂತ್ರಜ್ಞಾನಗಳನ್ನು ಒದಗಿಸುವುದು ಮತ್ತು ಕರಾವಳಿ ಕಾವಲು ಪಡೆಗಳ ನಡುವೆ ಸಹಭಾಗಿತ್ವ ಏರ್ಪಡಿಸುವುದು ಸೇರಿದಂತೆ ಹಲವು ವಿಷಯಗಳ ಬಗ್ಗೆ ಮುಖಂಡರು ಚರ್ಚೆ ನಡೆಸಿದರು.