ರಫಾ ಆಕ್ರಮಣದಿಂದ ಯುದ್ಧ ವಿರಾಮ ಮಾತುಕತೆಗೆ ಅಪಾಯ: ಅಮೆರಿಕ ಎಚ್ಚರಿಕೆ
ಜೋ ಬೈಡನ್ (Photo: PTI)
ವಾಷಿಂಗ್ಟನ್: ರಫಾ ನಗರದ ಮೇಲೆ ಬೃಹತ್ ಆಕ್ರಮಣ ನಡೆಸುವ ಯೋಜನೆಗೆ ಇಸ್ರೇಲ್ ಚಾಲನೆ ನೀಡಿದರೆ ಗಾಝಾ ಕದನ ವಿರಾಮದ ಮಾತುಕತೆ ಗಂಡಾಂತರಕ್ಕೆ ಸಿಲುಕಲಿದೆ ಎಂದು ಅಮೆರಿಕ ಎಚ್ಚರಿಕೆ ನೀಡಿದೆ.
ನಾಗರಿಕರ ರಕ್ಷಣೆಗೆ ಸೂಕ್ತ ಯೋಜನೆ ರೂಪಿಸದೆ ರಫಾದ ಮೇಲೆ ಆಕ್ರಮಣ ನಡೆಸುವುದಕ್ಕೆ ಅಮೆರಿಕದ ವಿರೋಧವಿದೆ. ಒಂದು ವೇಳೆ ಇಸ್ರೇಲ್ ಆಕ್ರಮಣದ ಯೋಜನೆಯನ್ನು ಮುಂದುವರಿಸಿದರೆ ಆಗ ಇಸ್ರೇಲ್ಗೆ ಇನ್ನಷ್ಟು ಶಸ್ತ್ರಾಸ್ತ್ರ ನೆರವನ್ನು ನಿಲ್ಲಿಸುವುದಾಗಿ ಅಮೆರಿಕ ಅಧ್ಯಕ್ಷ ಬೈಡನ್ ಎಚ್ಚರಿಕೆ ನೀಡಿದ್ದಾರೆ. ಗಾಝಾದಲ್ಲಿ ಹಮಾಸ್ ಭದ್ರಕೋಟೆಯಾದ ರಫಾದ ಮೇಲೆ ಪೂರ್ಣಪ್ರಮಾಣದ ದಾಳಿಯ ಯೋಜನೆ ಕಾರ್ಯಗತಗೊಳಿಸಿದರೆ ಇಸ್ರೇಲ್ ಹಮಾಸ್ಗೆ ಕಾರ್ಯತಂತ್ರದ ಗೆಲುವನ್ನು ಒದಗಿಸಲಿದೆ ಎಂದು ಅಮೆರಿಕ ಹೇಳಿದೆ.
ರಫಾದ ಮೇಲಿನ ಪೂರ್ಣಪ್ರಮಾಣದ ಭೂದಾಳಿಯು ಕದನ ವಿರಾಮ ಮಾತುಕತೆಯಲ್ಲಿ ಹಮಾಸ್ನ ಕೈಯನ್ನು ಬಲಪಡಿಸಲಿದೆ. ರಫಾದಲ್ಲಿ ಇಸ್ರೇಲ್ನ ಕಾರ್ಯಾಚರಣೆಯಲ್ಲಿ ನಾಗರಿಕರ ಸಾವು ನೋವು ಹೆಚ್ಚಾದಷ್ಟೂ, ಇಸ್ರೇಲ್ ಬಗ್ಗೆ ಹಮಾಸ್ ನಡೆಸುವ `ತಿರುಚಿದ ನಿರೂಪಣೆಗೆ' ಹೆಚ್ಚಿನ ಅಸ್ತ್ರಗಳನ್ನು ಒದಗಿಸಲಿದೆ ಎಂದು ಶ್ವೇತಭವನದ ರಾಷ್ಟ್ರೀಯ ಭದ್ರತಾ ವಕ್ತಾರ ಜಾನ್ ಕಿರ್ಬಿ ಹೇಳಿದ್ದಾರೆ. ಹಮಾಸ್ ಮೇಲೆ ಗರಿಷ್ಟ ಪ್ರಮಾಣದ ಒತ್ತಡ ಹೇರುವ ಮೂಲಕ ಸರ್ಜಿಕಲ್ ಕಾರ್ಯಾಚರಣೆಗೆ ಇಸ್ರೇಲ್ ಮುಂದಾಗಬೇಕು ಎಂದು ಅಮೆರಿಕ ಸಲಹೆ ನೀಡಿದೆ.