ಗಾಝಾ ಸರಕಾರದ ವರಿಷ್ಠ, ಇಬ್ಬರು ಹಿರಿಯ ಹಮಾಸ್ ನಾಯಕರ ಹತ್ಯೆಯನ್ನು ದೃಢಪಡಿಸಿದ ಇಸ್ರೇಲ್
ಹಮಾಸ್ ಸರಕಾರದ ವರಿಷ್ಠರಾದ ರವಾಹಿ ಮುಸ್ತಫಾ, ಆಂತರಿಕ ಭದ್ರತಾ ವಿಭಾಗದ ನಾಯಕ ಸಮೇಹ್ ಅಲ್-ಸಿರಾಜ್ (PC : X/IDF)
ಟೆಲ್ ಅವೀವ್ : ಗಾಝಾದಲ್ಲಿ ಮೂರು ತಿಂಗಳ ಹಿಂದೆ ತಾನು ನಡೆಸಿದ ದಾಳಿಯಲ್ಲಿ ಹಮಾಸ್ನ ಮೂವರು ಪ್ರಮುಖ ನಾಯಕರು ಸಾವನ್ನಪ್ಪಿರುವುದಾಗಿ ಇಸ್ರೇಲ್ ಸೇನೆ ಗುರುವಾರ ತಿಳಿಸಿದೆ.
ಗಾಝಾ ಪಟ್ಟಿಯಲ್ಲಿ ಹಮಾಸ್ ಸರಕಾರದ ವರಿಷ್ಠರಾದ ರವಾಹಿ ಮುಸ್ತಫಾ, ಆಂತರಿಕ ಭದ್ರತಾ ವಿಭಾಗದ ನಾಯಕ ಸಮೇಹ್ ಅಲ್-ಸಿರಾಜ್ ಹಾಗೂ ಕಮಾಂಡರ್ ಸಮಿ ಔದೆಹ್ ಅವರು ಸಾವನ್ನಪ್ಪಿದ್ದಾರೆಂದು ಇಸ್ರೇಲ್ ಸೇನೆಯು ಹೇಳಿಕೆಯೊಂದರಲ್ಲಿ ತಿಳಿಸಿದೆ.
ರವಾಹಿ ಮುಸ್ತಫಾ ಹಮಾಸ್ನ ಉನ್ನತ ಸ್ತರದ ಮುಖಂಡನಾಗಿದ್ದು ಹಾಗೂ ಹಮಾಸ್ ಪಡೆಯ ನಿಯೋಜನೆಗೆ ಸಂಬಂಧಿಸಿದ ನಿರ್ಧಾರಗಳ ಮೇಲೆ ನೇರವಾದ ಪರಿಣಾಮವನ್ನು ಬೀರುತ್ತಿದ್ದನು ಹಾಗೂ ಆತ ಹಮಾಸ್ನ ಉನ್ನತ ನಾಯಕ ಯಾಹ್ಯಾ ಸಿನ್ವರ್ ಅವರ ಬಲಗೈಯಂತಿದ್ದನೆಂದು ಇಸ್ರೇಲ್ ಸೇನೆ ಹೇಳಿದೆ.
2015ರಲ್ಲಿ ಅಮೆರಿಕದ ವಿದೇಶಾಂಗ ಇಲಾಖೆಯು ಮುಸ್ತಫಾನನ್ನು ‘‘ವಿಶೇಷ ಜಾಗತಿಕ ಭಯೋತ್ಪಾದಕ’’ನೆಂಬುದಾಗಿ ಘೋಷಿಸಿತ್ತು. ಮುಸ್ತಫಾ ಅವರು ಹಮಾಸ್ನ ಗಾಝಾ ಪಾಲಿಟ್ಬ್ಯೂರೋದ ಹಣಕಾಸು ವ್ಯವಹಾರಗಳ ವಿಭಾಗದ ಸದಸ್ಯನಾಗಿದ್ದನೆಂದು ಅದು ತಿಳಿಸಿತ್ತು.
ಕಳೆದ ವರ್ಷದ ಅಕ್ಟೋಬರ್ನಿಂದ ಗಾಝಾದ ಮೇಲೆ ಇಸ್ರೇಲ್ ನಡೆಸಿದ ದಾಳಿಯಲ್ಲಿ ಮಕ್ಕಳು, ಮಹಿಳೆಯರು ಸೇರಿದಂತೆ 47 ಸಾವಿರಕ್ಕೂ ಅಧಿಕ ಮಂದಿ ಮೃತಪಟ್ಟಿದ್ದಾರೆ.