ಚೀನಾದಲ್ಲಿ ದಾಖಲೆಯ ಮಳೆ | ಜಿಯಾಂಗ್ವನ್ ನಿವಾಸಿಗಳ ಸ್ಥಳಾಂತರ
ಸಾಂದರ್ಭಿಕ ಚಿತ್ರ Photo Credited : canva.com
ಬೀಜಿಂಗ್: ದಕ್ಷಿಣ ಚೀನಾದಲ್ಲಿ ನಿರಂತರ ಸುರಿಯುತ್ತಿರುವ ಗಾಳಿ, ಮಳೆಯಿಂದಾಗಿ ಗ್ವಾಂಗ್ಡಾಂಗ್ ಪ್ರಾಂತದ ಒಂದು ನಗರವನ್ನೇ ಸ್ಥಳಾಂತರಿಸಲಾಗಿದೆ ಎಂದು ಮಾಧ್ಯಮಗಳು ಗುರುವಾರ ವರದಿ ಮಾಡಿವೆ.
ಗುರುವಾರ ಮತ್ತೊಂದು ಸುತ್ತಿನ ಧಾರಾಕಾರ ಸುರಿದ ಹಿನ್ನೆಲೆಯಲ್ಲಿ ಹಲವು ಪ್ರದೇಶಗಳು ಜಲಾವೃತಗೊಂಡಿವೆ. ಶಾವೊಗುವನ್ ಪ್ರದೇಶದ ಜಿಯಾಂಗ್ವನ್ ನಗರದ ಸುಮಾರು 1,700 ಜನರನ್ನು ಬಸ್ಸು ಮತ್ತು ಹೆಲಿಕಾಪ್ಟರ್ ಮೂಲಕ ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಗಿದೆ. ವಿದ್ಯುತ್ ತಂತಿಗಳು ಕಡಿದುಬಿದ್ದಿದ್ದು ಮೊಬೈಲ್ ಟೆಲಿಫೋನ್ ನೆಟ್ವರ್ಕ್ಗೆ ತಡೆಯಾಗಿದೆ. ಕೆಸರು ಮಿಶ್ರಿತ ಪ್ರವಾಹದ ನೀರು ರಸ್ತೆಯಲ್ಲಿ ಉಕ್ಕಿಹರಿದ ಕಾರಣ ರಸ್ತೆ ಸಂಚಾರಕ್ಕೆ ಅಡ್ಡಿಯಾಗಿದೆ. ಹಲವು ಮನೆಗಳು ಮತ್ತು ಸೇತುವೆಗಳು ಹಾನಿಗೊಂಡಿವೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
72 ವರ್ಷಗಳಲ್ಲೇ ಇಂತಹ ಭಾರೀ ಮಳೆಯನ್ನು ನೋಡಿಲ್ಲ ಎಂದು ಸ್ಥಳೀಯರನ್ನು ಉಲ್ಲೇಖಿಸಿ ಸರಕಾರಿ ಸ್ವಾಮ್ಯದ `ಚೀನಾ ಡೈಲಿ' ಸುದ್ಧಿಸಂಸ್ಥೆ ವರದಿ ಮಾಡಿದೆ.