ರಿಪಬ್ಲಿಕನ್ ಅಧ್ಯಕ್ಷೀಯ ಅಭ್ಯರ್ಥಿ ಆಯ್ಕೆ ಪ್ರಕ್ರಿಯೆ; ಡೊನಾಲ್ಡ್ ಟ್ರಂಪ್ ಮುಂಚೂಣಿಯಲ್ಲಿ
ವಾಷಿಂಗ್ಟನ್:ಅಮೆರಿಕದ ಅಧ್ಯಕ್ಷೀಯ ಚುನಾವಣೆಯಲ್ಲಿ ಸ್ಪರ್ಧಿಸುವ ರಿಪಬ್ಲಿಕನ್ ಪಕ್ಷದ ಅಭ್ಯರ್ಥಿಯನ್ನು ಆಯ್ಕೆ ಮಾಡುವ ಪ್ರಕ್ರಿಯೆಯ ಮೊದಲ ಮತದಾನಕ್ಕೆ ಅಮೆರಿಕದ ಕೇಂದ್ರಭಾಗದ ಲೋವಾ ಸಜ್ಜಾಗಿದೆ.
ಎಂಟು ತಿಂಗಳ ಅವಧಿಯ ಅಧ್ಯಕ್ಷೀಯ ಪ್ರಾಥಮಿಕ ಪ್ರಕ್ರಿಯೆಗಳ ಆರಂಭಿಕ ಸ್ಪರ್ಧೆ ಇದಾಗಿದ್ದು, ಈ ಮತದಾನಲ್ಲಿ ಪಾಲ್ಗೊಳ್ಳುವವರು ಈ ಭಾಗದ 750ಕ್ಕೂ ಹೆಚ್ಚು ಶಾಲೆ, ಚರ್ಚ್ ಹಾಗೂ ಸಮುದಾಯ ಕೇಂದ್ರಗಳಲ್ಲಿ ಸೇರಿ ತಮ್ಮ ಆಯ್ಕೆಗಳ ಬಗ್ಗೆ ಚರ್ಚೆ ನಡೆಸಲಿದ್ದಾರೆ. ಗುಪ್ತ ಮತದಾನಕ್ಕೆ ಮುನ್ನ ಕೆಲವು ಗಂಟೆಗಳ ಕಾಲ ಚರ್ಚೆ ನಡೆಸಲಿದ್ದಾರೆ.
ಪಕ್ಷದ ಅಧ್ಯಕ್ಷೀಯ ಅಭ್ಯರ್ಥಿ ರೇಸ್ ನಲ್ಲಿ ಡೊನಾಲ್ಡ್ ಟ್ರಂಪ್ ಮುಂಚೂಣಿಯಲ್ಲಿದ್ದಾರೆ. ಅಮೆರಿಕದ ಮಾಜಿ ವಿಶ್ವಸಂಸ್ಥೆ ರಾಯಭಾರಿ ನಿಕ್ಕಿ ಹಾಲೆ ಮತ್ತು ಫ್ಲೋರಿಡಾ ಗವರ್ನರ್ ಡಾನ್ ಡೆಸ್ಯಾಂಟಿಸ್ ಅವರ ವಿರುದ್ಧ ಸುಲಭ ಜಯ ಸಾಧಿಸುವ ನಿರೀಕ್ಷೆಯಿದೆ. ಇದು ನವೆಂಬರ್ ನಲ್ಲಿ ನಡೆಯುವ ಚುನಾವಣೆಗೆ ಮೊದಲ ಪರೀಕ್ಷೆ ಎನಿಸಲಿದೆ.
ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಗೆಲುವಿನ ಮೇಲೆ ಕಣ್ಣಿಟ್ಟಿದ್ದಾರೆ. ಬಹುತೇಕ ಲೋವಾ ರಿಪಬ್ಲಿಕನ್ನರು, "ಅಮೆರಿಕವನ್ನು ಮತ್ತೆ ಶ್ರೇಷ್ಠ ದೇಶವನ್ನಾಗಿಸುವ ಅಗತ್ಯವನ್ನು ಮನಗಂಡಿದ್ದಾರೆ" ಎಂದು ಹೇಳಲಾಗಿದೆ. ಎಂಟು ವರ್ಷದ ಹಿಂದೆ ಈ ರಾಜ್ಯದಲ್ಲಿ ಟ್ರಂಪ್ ಗೆಲುವು ಸಾಧಿಸಲು ಸಾಧ್ಯವಾಗಿರಲಿಲ್ಲ. ಇದು ಟ್ರಂಪ್ ಹಾಗೂ ಅವರ ರಾಜಕೀಯ ಅಭಿಯಾನ ಹೇಗೆ ಬದಲಾಗಿದೆ ಎನ್ನುವುದಕ್ಕೆ ಸಾಕ್ಷಿ ಎಂದು ವಿಶ್ಲೇಷಿಸಲಾಗುತ್ತಿದೆ.