ಚೀನಾದಲ್ಲಿ ಉಸಿರಾಟ ಕಾಯಿಲೆಯ ಉಲ್ಬಣ ಸಾಂಕ್ರಾಮಿಕ ಪೂರ್ವದಷ್ಟು ಹೆಚ್ಚಿಲ್ಲ: ವಿಶ್ವ ಆರೋಗ್ಯ ಸಂಸ್ಥೆ
Photo:NDTV
ಜಿನೆವಾ: ಚೀನಾದಲ್ಲಿ ಈಗ ಎದುರಾಗಿರುವ ಉಸಿರಾಟದ ಕಾಯಿಲೆಯ ಹೆಚ್ಚಳವು ಕೋವಿಡ್-19 ಸಾಂಕ್ರಾಮಿಕ ರೋಗದ ಪೂರ್ವದ ಅವಧಿಯಷ್ಟು ಹೆಚ್ಚಿಲ್ಲ. ಇತ್ತೀಚಿನ ಪ್ರಕರಣಗಳಲ್ಲಿ ಯಾವುದೇ ಹೊಸ ಅಥವಾ ಅಸಾಮಾನ್ಯ ರೋಗಾಣುಗಳು ಕಂಡುಬಂದಿಲ್ಲ ಎಂದು ವಿಶ್ವ ಆರೋಗ್ಯ ಸಂಸ್ಥೆಯ ಅಧಿಕಾರಿ ಮರಿಯಾ ವಾನ್ಕೆರ್ಖೋವ್ ಹೇಳಿದ್ದಾರೆ.
ಎರಡು ವರ್ಷದ ಕೋವಿಡ್ ನಿರ್ಬಂಧ ತೆರವುಗೊಳಿಸಿದ ಬಳಿಕ ರೋಗಾಣುಗಳ ಸಂಪರ್ಕಕ್ಕೆ ಬರುವ ಮಕ್ಕಳ ಸಂಖ್ಯೆ ಹೆಚ್ಚಿರುವುದು ಹೊಸ ಕಾಯಿಲೆ ಉಲ್ಬಣಕ್ಕೆ ಒಂದು ಕಾರಣವಾಗಿರುವ ಸಾಧ್ಯತೆಯಿದೆ ಎಂದು ವಿಶ್ವಸಂಸ್ಥೆಯ ಸಾಂಕ್ರಾಮಿಕ ಮತ್ತು ಸಾಂಕ್ರಾಮಿಕ ತಡೆಗಟ್ಟುವಿಕೆ ವಿಭಾಗದ ಕಾರ್ಯನಿರ್ವಾಹಕ ನಿರ್ದೇಶಕಿಯಾಗಿರುವ ಮರಿಯಾ ಅಭಿಪ್ರಾಯಪಟ್ಟಿದ್ದಾರೆ.
`ಈಗ ನೋಡುತ್ತಿರುವ ಅಲೆಗಳು ಸಾಂಕ್ರಾಮಿಕ ರೋಗಕ್ಕೆ ಮುಂಚಿತವಾಗಿ, ಅಂದರೆ 2018-19ರಲ್ಲಿ ನಾವು ನೋಡಿದ ಅಲೆಗಳಷ್ಟು ಎತ್ತರದಲ್ಲಿಲ್ಲ. ಇದು ಹೊಸ ರೂಪಾಂತರಿ ಸೋಂಕಿನ ಸೂಚನೆಯಲ್ಲ. ಇದು ನಿರೀಕ್ಷಿತ. ಕಳೆದ ಒಂದು ಅಥವಾ ಎರಡು ವರ್ಷಗಳಲ್ಲಿ ಬಹುತೇಕ ದೇಶಗಳು ಈ ವಿದ್ಯಮಾನಕ್ಕೆ ಸಾಕ್ಷಿಯಾಗಿವೆ ಎಂದವರು ಸುದ್ಧಿಗೋಷ್ಠಿಯಲ್ಲಿ ಹೇಳಿದ್ದಾರೆ.
ಉಸಿರಾಟದ ಸಮಸ್ಯೆ ಪ್ರಕರಣ ಹೆಚ್ಚಲು ಯಾವುದೇ ಹೊಸ ವೈರಸ್ ಕಾರಣವಲ್ಲ. ಇನ್ಫ್ಲುಯೆಂಜಾ ವೈರಸ್ ಸೇರಿದಂತೆ ಏಕಕಾಲದಲ್ಲಿ ಹಲವು ರೋಗಕಾರಗಳ ಪರಿಚಲನೆಯಿಂದ ಈ ಸಮಸ್ಯೆ ಉಲ್ಬಣಿಸಿದೆ ಎಂದು ಚೀನಾದ ರಾಷ್ಟ್ರೀಯ ಆರೋಗ್ಯ ಆಯೋಗದ ವಕ್ತಾರ ಮಿ ಫೆಂಗ್ ರವಿವಾರ ಹೇಳಿದ್ದರು.