ಫೆಲಸ್ತೀನೀಯರ ಹಕ್ಕುಗಳನ್ನು ಸಂಪೂರ್ಣವಾಗಿ ಗುರುತಿಸಬೇಕು: ವಿಶ್ವಸಂಸ್ಥೆ ಮುಖ್ಯಸ್ಥ ಗುಟೆರಸ್
ವಿಶ್ವಸಂಸ್ಥೆ ಪ್ರಧಾನ ಕಾರ್ಯದರ್ಶಿ ಅಂಟೋನಿಯೊ ಗುಟೆರಸ್ Photo: twitter/antonioguterres
ವಿಶ್ವಸಂಸ್ಥೆ: ಫೆಲಸ್ತೀನೀಯರ ಹಕ್ಕುಗಳನ್ನು ಸಂಪೂರ್ಣವಾಗಿ ಗುರುತಿಸುವುದು ಮುಖ್ಯ ಎಂದು ನಾನು ಭಾವಿಸುತ್ತೇನೆ ಮತ್ತು `ಎರಡು ದೇಶ' ಪರಿಹಾರ ಸೂತ್ರವನ್ನು ದುರ್ಬಲಗೊಳಿಸುವ ಯಾವುದೇ ಪ್ರಯತ್ನವನ್ನು ಖಂಡಿಸುವುದೂ ಅಗತ್ಯವಾಗಿದೆ' ಎಂದು ವಿಶ್ವಸಂಸ್ಥೆ ಪ್ರಧಾನ ಕಾರ್ಯದರ್ಶಿ ಅಂಟೋನಿಯೊ ಗುಟೆರಸ್ ಹೇಳಿದ್ದಾರೆ.
ಆದರೆ, ಹಿಂಸಾತ್ಮಕ ಕ್ರಮಗಳಿಂದ ಫೆಲಸ್ತೀನೀಯರು ತಮ್ಮ ಹಿತಾಸಕ್ತಿಗಳನ್ನು ಸಮರ್ಥಿಸಿಕೊಳ್ಳಲು ಸಾಧ್ಯವಾಗದು ಎಂಬುದು ನನ್ನ ವಿನಮ್ರ ಅಭಿಪ್ರಾಯ. ಮಹಾತ್ಮಾ ಗಾಂಧೀಜಿಯವರ ಉದಾಹರಣೆಯನ್ನು ಯಾರೂ ಮರೆಯಬಾರದು ಎಂದು ಗುಟೆರಸ್ ಸುದ್ದಿಗೋಷ್ಟಿಯಲ್ಲಿ ಹೇಳಿದ್ದಾರೆ.
ಹೊಸದಿಲ್ಲಿಯಲ್ಲಿ ನಡೆದ ಜಿ20 ಶೃಂಗಸಭೆಯಲ್ಲಿ ಪಾಲ್ಗೊಂಡಿದ್ದು ಆಗ ಮಹಾತ್ಮಾ ಗಾಂಧೀಜಿಯವರಿಗೆ ಶೃದ್ಧಾಂಜಲಿ ಸಲ್ಲಿಸುವ ಅವಕಾಶ ದೊರಕಿತು ಎಂದು ಗುಟೆರಸ್ ಹೇಳಿದರು. ಹೊಸದಿಲ್ಲಿಗೆ ಭೇಟಿ ನೀಡಿದಾಗ ಭಾರತದಲ್ಲಿ ಅಲ್ಪಸಂಖ್ಯಾತರ ವಿರುದ್ಧದ ಹಿಂಸಾಚಾರದ ಆರೋಪದ ಬಗ್ಗೆ ಭಾರತದ ಮುಖಂಡರ ಬಗ್ಗೆ ಪ್ರಸ್ತಾವಿಸಿದ್ದೀರಾ ಎಂಬ ಪಾಕ್ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಅವರು `ಶೃಂಗಸಭೆಯ ಸಂದರ್ಭ ನರೇಂದ್ರ ಮೋದಿಯ ಜತೆ ಯಾವುದೇ ದ್ವಿಪಕ್ಷೀಯ ಸಭೆ ನಡೆಸಿಲ್ಲ.
ಆದರೆ ನಮ್ಮ ನಿಲುವು ಬಹಳ ಸ್ಪಷ್ಟವಾಗಿದೆ. ಧಾರ್ಮಿಕ ಅಸಹಿಷ್ಣುತೆ ಮಾನವಹಕ್ಕುಗಳ ಉಲ್ಲಂಘನೆಯಾಗಿದ್ದು ಅದು ಸ್ವೀಕಾರಾರ್ಹವಲ್ಲ' ಎಂದರು.