ಎಲ್ಲರ ಮನ ಗೆದ್ದಿದ್ದ 'ಮನ್'ಮೋಹನ್ ಸಿಂಗ್; ವಿಶ್ವ ನಾಯಕರಿಂದ ಹರಿದು ಬಂದ ಸಂತಾಪ
ಮನಮೋಹನ್ ಸಿಂಗ್ | PC : PTI
ವಾಷಿಂಗ್ಟನ್: ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರ ನಿಧನದ ನಂತರ ಅಮೆರಿಕ, ಕೆನಡಾ ಮತ್ತು ಶ್ರೀಲಂಕಾ ಸೇರಿದಂತೆ ಜಗತ್ತಿನಾದ್ಯಂತ ನಾಯಕರಿಂದ ಸಂತಾಪಗಳು ಹರಿದು ಬರುತ್ತಿದೆ.
ನೇಪಾಳ, ಮಾಲ್ಡೀವ್ಸ್ ಮತ್ತು ಅಫ್ಘಾನಿಸ್ತಾನ ಸೇರಿದಂತೆ ನೆರೆಯ ರಾಷ್ಟ್ರಗಳ ನಾಯಕರು ಮನಮೋಹನ್ ಸಿಂಗ್ ಅವರ ನಿಧನದ ಬಗ್ಗೆ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ. ಮನಮೋಹನ್ ಅವರ ಕೊಡುಗೆಗಳು ಮತ್ತು ತಮ್ಮ ರಾಷ್ಟ್ರಗಳೊಂದಿಗಿನ ಅವರ ಸ್ನೇಹ ಸಂಬಂಧಗಳನ್ನು ವಿಶ್ವ ನಾಯಕರು ಉಲ್ಲೇಖಿಸಿದ್ದಾರೆ.
ಭಾರತದ ಆರ್ಥಿಕ ಸುಧಾರಣೆಗಳ ಶಿಲ್ಪಿ ಮನಮೋಹನ್ ಸಿಂಗ್ ಅವರು ಗುರುವಾರ ರಾತ್ರಿ ನಿಧನರಾದರು. ಅವರಿಗೆ 92 ವರ್ಷ ವಯಸ್ಸಾಗಿತ್ತು. ಅವರು ಇತಿಹಾಸ ಪ್ರಾಧ್ಯಾಪಕರಾದ ಅವರ ಪತ್ನಿ ಗುರುಶರಣ್ ಕೌರ್ ಮತ್ತು ಮೂವರು ಪುತ್ರಿಯರನ್ನು ಅಗಲಿದ್ದಾರೆ.
"ದ್ವಿಪಕ್ಷೀಯ ಮಾತುಕತೆ ಫಲಪ್ರದವಾಗಿಸುವಲ್ಲಿ ಅವರೊಬ್ಬ ಶ್ರೇಷ್ಠ ಚಾಂಪಿಯನ್" ಎಂದು ಅಮೆರಿಕ ವಿದೇಶಾಂಗ ಕಾರ್ಯದರ್ಶಿ ಆಂಟೋನಿ ಬ್ಲಿಂಕೆನ್ ಮನಮೋಹನ್ ಸಿಂಗ್ ಅವರನ್ನು ನೆನಪಿಸಿಕೊಂಡಿದ್ದಾರೆ.
"ಡಾ. ಮನಮೋಹನ್ ಸಿಂಗ್ ಅಮೆರಿಕ ಭಾರತದ ದ್ವಿಪಕ್ಷೀಯ ಮಾತುಕತೆ ಫಲಪ್ರದವಾಗಿಸಿದ ಚಾಂಪಿಯನ್ಗಳಲ್ಲಿ ಒಬ್ಬರು. ಅವರ ಕೆಲಸವು ಕಳೆದ ಎರಡು ದಶಕಗಳಲ್ಲಿ ಎರಡೂ ದೇಶಗಳು ಒಟ್ಟಾಗಿ ಸಾಧಿಸಿದ ಹೆಚ್ಚಿನದಕ್ಕೆ ಅಡಿಪಾಯ ಹಾಕಿತು" ಎಂದು ವಿದೇಶಾಂಗ ಕಾರ್ಯದರ್ಶಿ ಅಂಟೋನಿ ಬ್ಲಿಂಕೆನ್ ಹೇಳಿದ್ದಾರೆ.
ಮನಮೋಹನ್ ಸಿಂಗ್ ಅವರ ನಿಧನಕ್ಕೆ ಭಾರತದ ಜನತೆಗೆ ಸಂತಾಪ ಸೂಚಿಸಿದ ಬ್ಲಿಂಕೆನ್, ಅಮೆರಿಕ ಭಾರತದ ನಡುವಿನ ನಾಗರಿಕ ಪರಮಾಣು ಸಹಕಾರ ಒಪ್ಪಂದವನ್ನು ಮುಂದುವರಿಸುವಲ್ಲಿ ಮಾಜಿ ಪ್ರಧಾನಿಯವರ ನಾಯಕತ್ವವು ಎರಡು ದೇಶಗಳ ನಡುವಿನ ಸಂಬಂಧದ ವೃದ್ಧಿಸುವಲ್ಲಿ ಪ್ರಮುಖ ಪಾತ್ರ ನಿರ್ವಹಿಸಿತು ಎಂದು ಹೇಳಿದರು.
ಕೆನಡಾದ ಮಾಜಿ ಪ್ರಧಾನಿ ಸ್ಟೀಫನ್ ಹಾರ್ಪರ್ ಅವರು ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರ ನಿಧನದ ಬಗ್ಗೆ ತಿಳಿದು ದುಃಖಿತನಾಗಿದ್ದೇನೆ ಎಂದು ಹೇಳಿದ್ದಾರೆ.
"ಅವರು ಅಸಾಧಾರಣ ಸಮಗ್ರತೆ ಮತ್ತು ಬುದ್ಧಿವಂತಿಕೆಯ ವ್ಯಕ್ತಿಯಾಗಿದ್ದರು. ಲಾರೀನ್ ಮತ್ತು ನಾನು ಅವರ ಕುಟುಂಬದ ಎಲ್ಲ ಸದಸ್ಯರಿಗೆ ಮತ್ತು ಸ್ನೇಹಿತರಿಗೆ ನಮ್ಮ ಸಂತಾಪವನ್ನು ತಿಳಿಸಲು ಬಯಸುತ್ತೇವೆ, ”ಎಂದು ಹೇಳಿದ್ದಾರೆ.
ನೇಪಾಳದ ಮಾಜಿ ಪ್ರಧಾನಿ ಪುಷ್ಪ ಕಮಲ್ ದಹಲ್ 'ಪ್ರಚಂಡ' ಎಕ್ಸ್ ಪೋಸ್ಟ್ನಲ್ಲಿ, "ಅಸಾಧಾರಣ ರಾಜನೀತಿಜ್ಞ ಡಾ. ಮನಮೋಹನ್ ಸಿಂಗ್ ಅವರ ನಿಧನದಿಂದ ತೀವ್ರ ದುಃಖವಾಗಿದೆ. ಅವರ ಕುಟುಂಬ ಮತ್ತು ಭಾರತದ ಜನರಿಗೆ ನನ್ನ ಹೃತ್ಪೂರ್ವಕ ಸಂತಾಪಗಳು," ಎಂದು ತಿಳಿಸಿದ್ದಾರೆ.
ಮಾಲ್ಡೀವ್ಸ್ನ ಮಾಜಿ ಅಧ್ಯಕ್ಷ ಮುಹಮ್ಮದ್ ನಶೀದ್ ಅವರು ಮಾಜಿ ಪ್ರಧಾನಿಯನ್ನು ಮಾಲ್ಡೀವ್ಸ್ನ ಉತ್ತಮ ಸ್ನೇಹಿತ ಎಂದು ಎಕ್ಸ್ ನಲ್ಲಿ ಪೋಸ್ಟ್ ಮಾಡಿದ್ದಾರೆ.
"ಮನಮೋಹನ್ ಸಿಂಗ್ ಅವರು ನಿಧನರಾಗಿದ್ದಾರೆಂದು ಎಂದು ತಿಳಿದು ತುಂಬಾ ದುಃಖವಾಗಿದೆ. ನಾನು ಯಾವಾಗಲೂ ಅವರೊಂದಿಗೆ ಕೆಲಸ ಮಾಡಲು ಸಂತೋಷಪಡುತ್ತಿದ್ದೆ. ಅವರು ಮಾಲ್ಡೀವ್ಸ್ನ ಉತ್ತಮ ಸ್ನೇಹಿತರಾಗಿದ್ದರು" ಎಂದು ನಶೀದ್ ಹೇಳಿದರು.
ಶ್ರೀಲಂಕಾದ ಮಾಜಿ ಅಧ್ಯಕ್ಷ ಮಹಿಂದಾ ರಾಜಪಕ್ಸೆ ತಮ್ಮ ಸಂದೇಶದಲ್ಲಿ "ದೂರದೃಷ್ಠಿಯುಳ್ಳ ಅರ್ಥಶಾಸ್ತ್ರಜ್ಞ ಮತ್ತು ಭಾರತದ ಆರ್ಥಿಕ ಉದಾರೀಕರಣದ ವಾಸ್ತುಶಿಲ್ಪಿ" ಎಂದು ಹೇಳಿದ್ದಾರೆ.
"ಭಾರತದ ಮಾಜಿ ಪ್ರಧಾನಿ ಡಾ. ಮನಮೋಹನ್ ಸಿಂಗ್ ಅವರ ನಿಧನದಿಂದ ತೀವ್ರ ದುಃಖವಾಗಿದೆ. ದೂರದೃಷ್ಟಿಯ ಅರ್ಥಶಾಸ್ತ್ರಜ್ಞ ಮತ್ತು ಭಾರತದ ಆರ್ಥಿಕ ಉದಾರೀಕರಣದ ಶಿಲ್ಪಿ, ಅವರ ಕೊಡುಗೆಗಳು ಭಾರತಕ್ಕೆ ಹೊಸ ಯುಗವನ್ನು ರೂಪಿಸಿವೆ. ಅವರ ಕುಟುಂಬ, ಸ್ನೇಹಿತರು ಮತ್ತು ಭಾರತದ ಜನರಿಗೆ ನನ್ನ ಹೃತ್ಪೂರ್ವಕ ಸಂತಾಪಗಳು," ಎಂದು ರಾಜಪಕ್ಸೆ ಹೇಳಿದ್ದಾರೆ.
ಅಫ್ಘಾನಿಸ್ತಾನದ ಮಾಜಿ ಅಧ್ಯಕ್ಷ ಹಮೀದ್ ಕರ್ಜೈ ಎಕ್ಸ್ ಪೋಸ್ಟ್ನಲ್ಲಿ ಭಾರತವು ತನ್ನ ಅತ್ಯಂತ ಶ್ರೇಷ್ಠ ಪುತ್ರರಲ್ಲಿ ಒಬ್ಬನನ್ನು ಕಳೆದುಕೊಂಡಿದೆ ಎಂದು ಹೇಳಿದ್ದಾರೆ.