ಟ್ರಂಪ್ ಮನೆ ಕಾಯಲು ರೊಬೊಟ್ ಶ್ವಾನ; ವೀಡಿಯೊ ವೈರಲ್
PC : X/@neneytv
ವಾಷಿಂಗ್ಟನ್: ಇತ್ತೀಚೆಗೆ ಮುಕ್ತಾಯಗೊಂಡ ಅಮೆರಿಕದ ಚುನಾವಣೆಯಲ್ಲಿ ಕಮಲಾ ಹ್ಯಾರಿಸ್ ಎದುರು ಗೆದ್ದ ಬಳಿಕ ಡೊನಾಲ್ಡ್ ಟ್ರಂಪ್ ಅವರ ಮಾರ್-ಎ-ಲಾಗೊ ಎಸ್ಟೇಟ್ನಲ್ಲಿ ಭದ್ರತೆಯನ್ನು ಬಿಗಿಗೊಳಿಸಿದ್ದು ಮನೆಯ ಕಾವಲಿಗೆ ರೊಬೊಟ್ ನಾಯಿಯನ್ನು ನೇಮಿಸಿರುವುದಾಗಿ ವರದಿಯಾಗಿದೆ.
ಫ್ಲೋರಿಡಾದ ಪಾಮ್ ಬೀಚ್ನಲ್ಲಿರುವ ಟ್ರಂಪ್ ಅವರ ಮಾರ್-ಎ-ಲಾಗೊ ನಿವಾಸವು ಅವರ ವೈಯಕ್ತಿಕ ಮತ್ತು ರಾಜಕೀಯ ಜೀವನದ ಕೇಂದ್ರ ಬಿಂದುವಾಗಿದೆ. ಚುನಾಯಿತ ಅಧ್ಯಕ್ಷರ ನಿವಾಸವಾಗಿ ಈ ಎಸ್ಟೇಟ್ ಭದ್ರತಾ ತಂಡಗಳ ಕಣ್ಗಾವಲಿನಲ್ಲಿದೆ. ಇದೀಗ ಎಸ್ಟೇಟ್ನ ಎದುರು ಇರುವ ಹುಲ್ಲುಗಾವಲಿನಲ್ಲಿ ರೊಬೊಟ್ ನಾಯಿಯೊಂದು ಅತ್ತಿಂದಿತ್ತ ಠಳಾಯಿಸುತ್ತಿರುವ ವೀಡಿಯೊವನ್ನು ಕಾಲಿನ್ ರಗ್ ಎಂಬವರು `ಎಕ್ಸ್'ನಲ್ಲಿ ಪೋಸ್ಟ್ ಮಾಡಿದ್ದು ಈ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.
ಕಣ್ಗಾವಲು ತಂತ್ರಜ್ಞಾನವನ್ನು ಹೊಂದಿರುವ ರೊಬೊಟ್ ನಾಯಿಯನ್ನು `ಬಾಸ್ಟನ್ ಡೈನಾಮಿಕ್ಸ್' ಸಂಸ್ಥೆ ಸೃಷ್ಟಿಸಿದೆ ಎಂದವರು ವೀಡಿಯೊದ ಜತೆ ಪೋಸ್ಟ್ ಮಾಡಿದ್ದಾರೆ. ಚುನಾಯಿತ ಅಧ್ಯಕ್ಷರನ್ನು ರಕ್ಷಿಸುವುದು ಪ್ರಮುಖ ಆದ್ಯತೆಯಾಗಿದೆ. ನಾವು ನಿರ್ದಿಷ್ಟ ಸಾಮರ್ಥ್ಯಗಳನ್ನು ಹೊಂದಲು ಸಾಧ್ಯವಿಲ್ಲ. ರೊಬೊಟಿಕ್ ನಾಯಿಗಳು ಕಣ್ಗಾವಲು ತಂತ್ರಜ್ಞಾನವನ್ನು ಹೊಂದಿದ್ದು ನಮ್ಮ ರಕ್ಷಣಾತ್ಮಕ ಕಾರ್ಯಾಚರಣೆಗಳನ್ನು ಬೆಂಬಲಿಸುವ ಸುಧಾರಿತ ಸಂವೇದಕಗಳ ಒಂದು ಶ್ರೇಣಿಯನ್ನು ಹೊಂದಿದೆ ಎಂದು ಅಮೆರಿಕದ ರಹಸ್ಯ ಸೇವೆಗಳ ವಕ್ತಾರರನ್ನು ಉಲ್ಲೇಖಿಸಿ `ನ್ಯೂಯಾರ್ಕ್ ಪೋಸ್ಟ್' ವರದಿ ಮಾಡಿದೆ.