‘ಹ್ಯಾಟ್ರಿಕ್’ ವಿಕೆಟ್ನಿಂದ ವಂಚಿತರಾದ ಅಕ್ಷರ್ ಪಟೇಲ್ ; ಸುಲಭ ಕ್ಯಾಚ್ ಕೈಚೆಲ್ಲಿದ ರೋಹಿತ್ ಶರ್ಮಾ

ಅಕ್ಷರ್ ಪಟೇಲ್, ರೋಹಿತ್ ಶರ್ಮಾ | PC : X
ದುಬೈ : ಆಲ್ರೌಂಡರ್ ಅಕ್ಷರ್ ಪಟೇಲ್ ಐಸಿಸಿ ಚಾಂಪಿಯನ್ಸ್ ಟ್ರೋಫಿಯಲ್ಲಿ ಗುರುವಾರ ಭಾರತ ಕ್ರಿಕೆಟ್ ತಂಡದ ಆಡಿದ ತನ್ನ ಮೊದಲ ಪಂದ್ಯದ ವೇಳೆ ‘ಹ್ಯಾಟ್ರಿಕ್’ ವಿಕೆಟ್ ಕಬಳಿಸುವ ಅವಕಾಶದಿಂದ ವಂಚಿತರಾದರು.
ದುಬೈ ಇಂಟರ್ನ್ಯಾಶನಲ್ ಕ್ರಿಕೆಟ್ ಸ್ಟೇಡಿಯಮ್ನಲ್ಲಿ ನಾಯಕ ರೋಹಿತ್ ಶರ್ಮಾ ಬಾಂಗ್ಲಾದೇಶ ತಂಡದ ವಿರುದ್ಧ ಸುಲಭ ಕ್ಯಾಚ್ ಕೈಚೆಲ್ಲಿದ ಪರಿಣಾಮ ಅಕ್ಷರ್ ಸತತ 3 ಎಸೆತಗಳಲ್ಲಿ 3 ವಿಕೆಟ್ಗಳನ್ನು ಪಡೆಯುವ ಅಪೂರ್ವ ಅವಕಾಶ ಕಳೆದುಕೊಂಡರು.
ಎಡಗೈ ಸ್ಪಿನ್ನರ್ ಅಕ್ಷರ್ ಎರಡು ಎಸೆತಗಳಲ್ಲಿ ಎರಡು ವಿಕೆಟ್ಗಳನ್ನು ಪಡೆದು ಎದುರಾಳಿ ತಂಡಕ್ಕೆ ಆಘಾತ ನೀಡಿದರು. ಆದರೆ, ಅವರಿಗೆ ಅಪರೂಪದ ಸಾಧನೆವೊಂದನ್ನು ಮಾಡಲು ಸಾಧ್ಯವಾಗಲಿಲ್ಲ.
ಬಾಂಗ್ಲಾದೇಶ ತಂಡವು 35 ರನ್ಗೆ 3 ವಿಕೆಟ್ಗಳನ್ನು ಕಳೆದುಕೊಂಡು ಸಂಕಷ್ಟದಲ್ಲಿದ್ದಾಗ ಅಕ್ಷರ್ 9ನೇ ಓವರ್ನಲ್ಲಿ ಬೌಲಿಂಗ್ ದಾಳಿಗೆ ಇಳಿದರು. ತನ್ನ ಸ್ಪೆಲ್ನ ಎರಡನೇ ಎಸೆತದಲ್ಲಿ ತಂಝೀದ್ ಹಸನ್(25 ರನ್, 25 ಎಸೆತ)ವಿಕೆಟನ್ನು ಪಡೆದರು. ವಿಕೆಟ್ಕೀಪರ್ ಕೆ.ಎಲ್.ರಾಹುಲ್ ಸುರಕ್ಷಿತವಾಗಿ ಕ್ಯಾಚ್ ಪಡೆದರು.
ಮುಂದಿನ ಎಸೆತದಲ್ಲಿ ಹಿರಿಯ ಬ್ಯಾಟರ್ ಮುಶ್ಫೀಕುರ್ರಹೀಂ (0)ವಿಕೆಟನ್ನು ಉರುಳಿಸಿದರು. ವಿಕೆಟ್ ಹಿಂದುಗಡೆ ರಾಹುಲ್ ಮತ್ತೊಂದು ಕ್ಯಾಚ್ ಪಡೆದರು.
ಅಕ್ಷರ್ ಹ್ಯಾಟ್ರಿಕ್ ಅಂಚಿನಲ್ಲಿದ್ದಾಗ ಭಾರತೀಯ ಪಾಳಯದಲ್ಲಿ ಸಂಭ್ರಮ ಮನೆ ಮಾಡಿತ್ತು. ಕ್ರೀಡಾಂಗಣದಲ್ಲಿ ನೆರೆದಿದ್ದ ಕ್ರಿಕೆಟ್ ಪ್ರೇಮಿಗಳು ಅಕ್ಷರ್, ಹ್ಯಾಟ್ರಿಕ್ ಪೂರೈಸುವುದನ್ನು ಕುತೂಹಲದಿಂದ ಎದುರು ನೋಡುತ್ತಿದ್ದರು. ಹೊಸ ಬ್ಯಾಟರ್ ಜಾಕರ್ ಅಲಿ ಅವರು ಕ್ರೀಸ್ಗೆ ಇಳಿದಾಗ ಸ್ಲಿಪ್ ಹಾಗೂ ಲೆಗ್ ಸ್ಲಿಪ್ನಲ್ಲಿ ಫೀಲ್ಡರ್ಗಳು ಇದ್ದರು.
ಜಾಕರ್ ಅವರು ಅಕ್ಷರ್ ಎಸೆತವನ್ನು ರಕ್ಷಣಾತ್ಮಕವಾಗಿ ಆಡಲು ಮುಂದಾದರು. ಚೆಂಡು ಮೊದಲ ಸ್ಲಿಪ್ನತ್ತ ಚಿಮ್ಮಿತು. ಅಲ್ಲಿ ಫೀಲ್ಡಿಂಗ್ ನಿರತರಾಗಿದ್ದ ರೋಹಿತ್ ಶರ್ಮಾಗೆ ಅಕ್ಷರ್ ಹೆಸರನ್ನು ದಾಖಲೆ ಪುಸ್ತಕದಲ್ಲಿ ಸೇರಿಸುವ ಅವಕಾಶ ಇತ್ತು. ಆದರೆ ಭಾರತ ಕ್ರಿಕೆಟ್ ತಂಡದ ನಾಯಕ ಕ್ಯಾಚ್ ಕೈ ಚೆಲ್ಲಿದರು. ಚೆಂಡು ಅವರ ಬೆರಳಿನಿಂದ ಜಾರಿಹೋಯಿತು. ಆಗ ರೋಹಿತ್ ಕ್ಯಾಚ್ ಕೈಚೆಲ್ಲಿದ್ದಕ್ಕೆ ತೀವ್ರ ಹತಾಶೆ ಹೊರಹಾಕಿದರು.
ಅಕ್ಷರ್ಗೆ ಇದರಿಂದ ಬೇಸರವಾದಂತೆ ಕಂಡುಬಂದರೂ ತನ್ನ ಸ್ಪೆಲ್ ಮುಂದುವರಿಸಿದರು. ಅಕ್ಷರ್ 9ನೇ ಓವರ್ನ ಕೊನೆಯ ಎರಡು ಎಸೆತಗಳಲ್ಲಿ ಕೇವಲ ಒಂದು ರನ್ ನೀಡಿದರು. ಇನಿಂಗ್ಸ್ನ 9ನೇ ಓವರ್ನಲ್ಲಿ 1 ರನ್ಗೆ 2 ವಿಕೆಟ್ಗಳನ್ನು ಪಡೆದರು.
ಬಾಂಗ್ಲಾದೇಶ ತಂಡವು 9ನೇ ಓವರ್ನ ಅಂತ್ಯದಲ್ಲಿ 36 ರನ್ಗೆ 5 ವಿಕೆಟ್ಗಳನ್ನು ಕಳೆದುಕೊಂಡಿತು