ರೂ. 2,792 ಕೋಟಿ ಮೌಲ್ಯದ ರಷ್ಯಾ ಬೇಹುಗಾರಿಕೆ ವಿಮಾನವನ್ನು ಹೊಡೆದುರುಳಿಸಿದ ಉಕ್ರೇನ್: ವರದಿ
Photo: NDTV
ಕ್ವೀವ್: ರವಿವಾರ ರಾತ್ರಿ ನಿಖರ ಯೋಜನೆ ಹಾಗೂ ಕಾರ್ಯಗತ ಕಾರ್ಯಾಚರಣೆಯೊಂದಿಗೆ ರೂ. 274 ದಶಲಕ್ಷ ಪೌಂಡ್ (ರೂ. 2,792.8 ಕೋಟಿ) ಮೌಲ್ಯದ ರಷ್ಯಾ ಬೇಹುಗಾರಿಕೆ ವಿಮಾನವನ್ನು ಅಝೋವ್ ಸಮುದ್ರದ ಮೇಲೆ ಹೊಡೆದುರುಳಿಸಲಾಗಿದೆ ಎಂದು ಉಕ್ರೇನ್ ಹೇಳಿದೆ.
ಉಕ್ರೇನ್ ವಾಯುಪಡೆಯು ದೀರ್ಘ ವ್ಯಾಪ್ತಿಯ ರಡಾರ್ ಪತ್ತೆ ಹಚ್ಚುವ ಎ-50 ವಿಮಾನ ಹಾಗೂ ಇಲ್ಯುಶಿನ್-ಐಎಲ್-22 ವೈಮಾನಿಕ ನಿಯಂತ್ರಣ ಕೇಂದ್ರವನ್ನು ನಾಶಪಡಿಸಿದೆ ಎಂದು ಉಕ್ರೇನ್ ಸೇನಾ ಮುಖ್ಯಸ್ಥ ಜನರಲ್ ವಲೇರಿ ಝಲುಶ್ಯಂಯಿ ಅವರನ್ನು ಉಲ್ಲೇಖಿಸಿ BBC ಸುದ್ದಿ ಸಂಸ್ಥೆ ವರದಿ ಮಾಡಿದೆ. ಸೋವಿಯತ್ ಕಾಲಘಟ್ಟದ ಎ-50 ವಿಮಾನಕ್ಕೆ ಕ್ಷಿಪಣಿಗಳು ಹಾಗೂ ಶತ್ರುಗಳ ಯುದ್ಧ ವಿಮಾನಗಳನ್ನು ಪತ್ತೆ ಹಚ್ಚುವ ಸಾಮರ್ಥ್ಯವಿದ್ದು, ಅದನ್ನು ಅಂತರಿಕ್ಷ ನಿಯಂತ್ರಣ ಕೇಂದ್ರವಾಗಿಯೂ ಬಳಸಬಹುದಾಗಿದೆ.
ರಶ್ಯಾ ಬಳಿ ಆರು ಕಾರ್ಯನಿರತ ಎ-50 ವಿಮಾನಗಳಿರುವ ಸಾಧ್ಯತೆ ಇದೆ ಎಂದು BBC ಸುದ್ದಿ ಸಂಸ್ಥೆ ಹೇಳಿದೆ.
ಆದರೆ, ದಾಳಿ ಕುರಿತ ಮಾಹಿತಿಗಳನ್ನು ರಷ್ಯಾ ಅಧಿಕಾರಿಗಳು ನಿರಾಕರಿಸಿದ್ದರೂ, ಎ-50 ವಿಮಾನದ ನಷ್ಟವು ಗಂಭೀರ ಸಂಗತಿಯಾಗಿದೆ ಎಂದು ಯುದ್ಧದ ಪರ ಇರುವ ರಷ್ಯಾ ವಕ್ತಾರರು ಅಭಿಪ್ರಾಯ ಪಟ್ಟಿದ್ದಾರೆ.