ಚೆಸ್ ದಂತಕಥೆ ಕ್ಯಾಸ್ಪರೋವ್ರನ್ನು ಭಯೋತ್ಪಾದಕರ ಪಟ್ಟಿಗೆ ಸೇರಿಸಿದ ರಶ್ಯ
ಕ್ಯಾಸ್ಪರೋವ್ | Photo : NDTV
ಮಾಸ್ಕೋ : ರಶ್ಯದ ಚೆಸ್ ದಂತಕಥೆ, 60 ವರ್ಷದ ಮಾಜಿ ಚೆಸ್ ವಿಶ್ವಚಾಂಪಿಯನ್ ಮತ್ತು ರಾಜಕೀಯ ಕಾರ್ಯಕರ್ತ ಗ್ಯಾರಿ ಕ್ಯಾಸ್ಪರೋವ್ರನ್ನು `ಭಯೋತ್ಪಾದಕರು ಮತ್ತು ಉಗ್ರಗಾಮಿಗಳ' ಪಟ್ಟಿಗೆ ಸೇರಿಸಲಾಗಿದೆ.
ಅಧ್ಯಕ್ಷ ವ್ಲಾದಿಮಿರ್ ಪುಟಿನ್ರ ದೀರ್ಘ ಕಾಲದ ವಿರೋಧಿಯಾಗಿರುವ ಕ್ಯಾಸ್ಪರೋವ್, ಉಕ್ರೇನ್ನಲ್ಲಿ ರಶ್ಯ ನಡೆಸುತ್ತಿರುವ ಆಕ್ರಮಣದ ವಿರುದ್ಧ ನಿರಂತರ ಧ್ವನಿ ಎತ್ತಿದ್ದರು. ವಿಶ್ವದ ಸಾರ್ವಕಾಲಿಕ ಶ್ರೇಷ್ಟ ಚೆಸ್ ಆಟಗಾರರಲ್ಲಿ ಒಬ್ಬರೆಂದು ಗುರುತಿಸಿಕೊಂಡಿರುವ ಕ್ಯಾಸ್ಪರೋವ್ ಸುಮಾರು 10 ವರ್ಷದಿಂದ ಅಮೆರಿಕದಲ್ಲಿ ನೆಲೆಸಿದ್ದಾರೆ. ರಶ್ಯದಲ್ಲಿ ಪ್ರಜಾಸತ್ತಾತ್ಮಕ ಪರಿವರ್ತನೆಗಾಗಿ ಉಕ್ರೇನ್ ರಶ್ಯವನ್ನು ಸೋಲಿಸಬೇಕಾಗಿದೆ. ಇದಕ್ಕೆ ಉಕ್ರೇನ್ಗೆ ಪಾಶ್ಚಿಮಾತ್ಯ ದೇಶಗಳ ಬೆಂಬಲ ಬೇಕು ಎಂದು ಕಳೆದ ವರ್ಷ ಹೇಳಿಕೆ ನೀಡಿದ್ದರು. ಅಕ್ರಮ ಹಣ ವರ್ಗಾವಣೆ, ಭಯೋತ್ಪಾದಕರಿಗೆ ಆರ್ಥಿಕ ನೆರವು ನೀಡುವವರನ್ನು ರಶ್ಯದ ಆರ್ಥಿಕ ವ್ಯವಹಾರಗಳ ನಿಗಾ ಏಜೆನ್ಸಿ `ರೊಸ್ಫಿನ್ ಮಾನಿಟರಿಂಗ್' ಭಯೋತ್ಪಾದಕರ ಪಟ್ಟಿಗೆ ಸೇರಿಸುತ್ತದೆ ಮತ್ತು ಇಂತವರ ಬ್ಯಾಂಕ್ ಖಾತೆಗಳನ್ನು ಸ್ಥಂಭನಗೊಳಿಸುತ್ತದೆ.