ರಶ್ಯ: ವಿದೇಶಿ ಪತ್ರಕರ್ತರ ಬಂಧನ
ಮಾಸ್ಕೊ: ರಶ್ಯ ರಾಜಧಾನಿ ಮಾಸ್ಕೋದಲ್ಲಿ ಶನಿವಾರ ನಡೆದ ಪ್ರತಿಭಟನೆಯನ್ನು ಚದುರಿಸಲು ಪೊಲೀಸರು ಬಲಪ್ರಯೋಗ ನಡೆಸಿದ ಬಳಿಕ ಸ್ಥಳದಲ್ಲಿದ್ದ ಸುಮಾರು 20 ವಿದೇಶಿ ಪತ್ರಕರ್ತರನ್ನು ಬಂಧಿಸಿ ಕೆಲವು ಗಂಟೆಗಳ ಬಳಿಕ ಬಿಡುಗಡೆ ಮಾಡಲಾಗಿದೆ ಎಂದು ವರದಿಯಾಗಿದೆ.
ಉಕ್ರೇನ್‍ನಲ್ಲಿ ರಶ್ಯ ಪರ ಹೋರಾಟ ನಡೆಸುತ್ತಿರುವ ಯೋಧರನ್ನು ವಾಪಾಸು ಕರೆಸಿಕೊಳ್ಳಬೇಕು ಎಂದು ಆಗ್ರಹಿಸಿ ಯೋಧರ ಪತ್ನಿಯರು ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಅವರ ಚುನಾವಣಾ ಪ್ರಚಾರ ಕಚೇರಿಯೆದುರು ಪ್ರತಿಭಟನೆ ಹಮ್ಮಿಕೊಂಡಿದ್ದರು. ಮಹಿಳೆಯರು ಘೋಷಣೆ ಕೂಗುತ್ತಾ ರ‍್ಯಾಲಿ ನಡೆಸುತ್ತಿರುವುದನ್ನು ವರದಿ ಮಾಡುತ್ತಿದ್ದ ಸುಮಾರು 20 ಪತ್ರಕರ್ತರಿಗೆ ಪೊಲೀಸ್ ವ್ಯಾನ್ ಹತ್ತುವಂತೆ ಸೂಚಿಸಿದ ಪೊಲೀಸರು ಅವರನ್ನು ಕಿಟಯ್‍ಗೊರೊಡ್ ಠಾಣೆಗೆ ಕರೆದೊಯ್ದು ಕೆಲವು ಗಂಟೆಗಳ ಬಳಿಕ ಬಿಡುಗಡೆಗೊಳಿಸಲಾಗಿದೆ. ಅವರ ವಿರುದ್ಧ ಯಾವುದೇ ಪ್ರಕರಣ ದಾಖಲಿಸಲಾಗಿಲ್ಲ ಎಂದು ವರದಿ ಹೇಳಿದೆ.
ರಾಯ್ಟರ್ಸ್ ವರದಿಗಾರ ಸೇರಿದಂತೆ ಸುಮಾರು 20 ಪತ್ರಕರ್ತರನ್ನು ರಶ್ಯ ಪೊಲೀಸರು ಬಂಧಿಸಿದ್ದಾರೆ. ಪತ್ರಕರ್ತರಿಗೆ ಮುಕ್ತವಾಗಿ ವರದಿ ಮಾಡುವ ಅವಕಾಶ ಇರಬೇಕು ಎಂದು ರಾಯ್ಟರ್ಸ್ ಸುದ್ದಿಸಂಸ್ಥೆ ಆಗ್ರಹಿಸಿದೆ. ಪತ್ರಕರ್ತರು ಹಾಗೂ ಮಾನವ ಹಕ್ಕುಗಳ ಕಾರ್ಯಕರ್ತರು ಸೇರಿದಂತೆ 27 ಮಂದಿಯನ್ನು ಬಂಧಿಸಿ ಹಲವು ಗಂಟೆಗಳ ಬಳಿಕ ಬಿಡುಗಡೆ ಮಾಡಲಾಗಿದೆ ಎಂದು ಮೂಲಗಳನ್ನು ಉಲ್ಲೇಖಿಸಿ ಸಿಎನ್‍ಎನ್ ವರದಿ ಮಾಡಿದೆ.