ಉಕ್ರೇನ್ ಮೇಲೆ ರಶ್ಯದಿಂದ ಕ್ಷಿಪಣಿ ಮಳೆ : 13 ಮಂದಿಗೆ ಗಾಯ
ಕೀವ್, ಮಾ.21: ಉಕ್ರೇನ್ ರಾಜಧಾನಿ ಕೀವ್ ಮೇಲೆ ಗುರುವಾರ ಮುಂಜಾನೆ ರಶ್ಯ 31 ಬ್ಯಾಲಿಸ್ಟಿಕ್ ಮತ್ತು ಕ್ರೂಸ್ ಕ್ಷಿಪಣಿಗಳ ದಾಳಿ ನಡೆಸಿದ್ದು 13 ಮಂದಿಗೆ ಗಾಯಗಳಾಗಿವೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಬುಧವಾರ ರಶ್ಯದ ಬೆಲ್ಗೊರೊಡ್ ಪ್ರಾಂತದ ಮೇಲೆ ಉಕ್ರೇನ್ನ ವೈಮಾನಿಕ ದಾಳಿಯಲ್ಲಿ 5 ಮಂದಿ ಗಾಯಗೊಂಡಿದ್ದು ಹಲವು ಮನೆಗಳಿಗೆ ಹಾಗೂ ಸಿಟಿ ಸ್ಪೋಟ್ರ್ಸ್ ಸ್ಟೇಡಿಯಂಗೆ ಹಾನಿಯಾಗಿತ್ತು. ಈ ದಾಳಿಗೆ ಪ್ರತೀಕಾರ ಕೈಗೊಳ್ಳುವುದಾಗಿ ರಶ್ಯ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಘೋಷಿಸಿದ ಮರುದಿನವೇ ರಶ್ಯದ ಕ್ಷಿಪಣಿ ದಾಳಿ ನಡೆದಿದೆ.
ರಶ್ಯವು 2 ಬ್ಯಾಲಿಸ್ಟಿಕ್ ಕ್ಷಿಪಣಿಗಳು ಹಾಗೂ 29 ಕ್ರೂಸ್ ಕ್ಷಿಪಣಿಗಳನ್ನು ಉಡಾವಣೆ ಮಾಡಿದ್ದು ಉಕ್ರೇನ್ನ ವಾಯು ರಕ್ಷಣಾ ವ್ಯವಸ್ಥೆ ಎಲ್ಲಾ ಕ್ಷಿಪಣಿಗಳನ್ನೂ ಹೊಡೆದುರುಳಿಸಿದೆ. ಆದರೂ ಛಿದ್ರಗೊಂಡ ಕ್ಷಿಪಣಿಗಳ ಚೂರು ಬಿದ್ದು ಮಗು ಸಹಿತ 13 ಮಂದಿ ಗಾಯಗೊಂಡಿದ್ದಾರೆ. ಅಪಾರ್ಟ್ಮೆಂಟ್ ಒಂದಕ್ಕೆ ಬೆಂಕಿ ಹತ್ತಿಕೊಂಡಿದ್ದು ಸುಮಾರು 80 ಮಂದಿಯನ್ನು ಅಪಾರ್ಟ್ಮೆಂಟ್ನಿಂದ ತೆರವುಗೊಳಿಸಲಾಗಿದೆ. ಅಪಾರ್ಟ್ಮೆಂಟ್ ಬಳಿ ಪಾರ್ಕ್ ಮಾಡಿದ್ದ ಹಲವು ಕಾರುಗಳಿಗೆ ಹಾನಿಯಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.