ರಶ್ಯ: ವ್ಯಾಗ್ನರ್ ದಂಗೆಯ ಸಂದರ್ಭ ಬ್ಯಾಂಕಿನಿಂದ ಹಣ ಹಿಂದೆಗೆತ ಹೆಚ್ಚಳ
ಮಾಸ್ಕೊ: ವ್ಯಾಗ್ನರ್ ಗುಂಪಿನ ಅಧ್ಯಕ್ಷ ಯೆವ್ಗಿನಿ ಪ್ರಿಗೊಝಿನ್ ನೇತೃತ್ವದಲ್ಲಿ ನಡೆದ ಸಂಕ್ಷಿಪ್ತ ದಂಗೆಯ ಸಂದರ್ಭ ಬ್ಯಾಂಕ್ನಿಂದ ರಶ್ಯದ ಜನತೆ ಸುಮಾರು 1.1 ಶತಕೋಟಿ ಡಾಲರ್ ಹಣವನ್ನು ಹಿಂಪಡೆದಿದ್ದರು ಎಂದು ಮಾಸ್ಕೊ ಟೈಮ್ಸ್ ವರದಿ ಮಾಡಿದೆ. ಜೂನ್ 23ರಂದು ರಶ್ಯದ ಕ್ಷಿಪಣಿ ದಾಳಿಯಲ್ಲಿ ತನ್ನ ಪಡೆಯ ಸುಮಾರು 30 ಯೋಧರು ಹತರಾಗಿದ್ದಾರೆ ಎಂದು ಆರೋಪಿಸಿದ್ದ ವ್ಯಾಗ್ನರ್ ಗುಂಪಿನ ಮುಖಂಡ ಪ್ರಿಗೊಝಿನ್ ರಶ್ಯದ ವಿರುದ್ಧ ತಿರುಗಿ ಬಿದ್ದಿದ್ದರು.
ಆದರೆ ಅನಿರೀಕ್ಷಿತವಾಗಿ ಆರಂಭವಾಗಿದ್ದ ಈ ದಂಗೆ ಮರುದಿನವೇ ಹಠಾತ್ತಾಗಿ ಅಂತ್ಯಗೊಂಡಿತ್ತು. ದಂಗೆಯ ಕಾರಣ ಗಾಬರಿಗೊಂಡಿದ್ದ ರಶ್ಯದ ಜನತೆ ಜೂನ್ 23ರಿಂದ 25ರ ಅವಧಿಯಲ್ಲಿ ರಶ್ಯದ ಬ್ಯಾಂಕ್ಗಳಿಂದ 100 ಶತಕೋಟಿ ರೂಬಲ್(1.1 ಶತಕೋಟಿ ಡಾಲರ್) ಹಿಂಪಡೆದಿದ್ದಾರೆ ಎಂದು ರಶ್ಯದ ಸೆಂಟ್ರಲ್ ಬ್ಯಾಂಕ್ ವರದಿ ಮಾಡಿದೆ.
ಜೂನ್ ತಿಂಗಳಲ್ಲಿ ರಶ್ಯದ ಬ್ಯಾಂಕ್ಗಳಿಂದ ಒಟ್ಟು 5.5 ಶತಕೋಟಿ ಡಾಲರ್ ಹಣ ಹಿಂಪಡೆಯಲಾಗಿದ್ದು ಅದರಲ್ಲಿ 20ಶೇ.ದಷ್ಟನ್ನು ಜೂನ್ 23ರಿಂದ ಜೂನ್ 25ರ ಅವಧಿಯಲ್ಲಿ ಹಿಂಪಡೆಯಲಾಗಿದೆ. ನಗದು ಚಲಾವಣೆಯಲ್ಲಿನ ಇಂತಹ ಹೆಚ್ಚಳವು ತನ್ನ ವಿತ್ತೀಯ ನೀತಿಯ ಮೇಲೆ ಪ್ರಭಾವ ಬೀರುವುದಿಲ್ಲ ಎಂದು ಬ್ಯಾಂಕ್ನ ವರದಿ ಹೇಳಿದೆ. ಕಳೆದ ವಾರ ರಶ್ಯದ ಕರೆನ್ಸಿ ರೂಬಲ್ ಮೌಲ್ಯ ಕಳೆದ 15 ತಿಂಗಳಲ್ಲೇ ಅತ್ಯಂತ ಕನಿಷ್ಠ ಮಟ್ಟಕ್ಕೆ ಕುಸಿದಿದ್ದು ಇದಕ್ಕೆ ವ್ಯಾಗ್ನರ್ ದಂಗೆಯೂ ಕಾರಣವಾಗಿದೆ. ಆದರೆ ರಫ್ತು ಪ್ರಮಾಣ ಕುಸಿದಿರುವುದು ಮೂಲ ಕಾರಣ ಎಂದು ಆರ್ಥಿಕ ತಜ್ಞ ಎವ್ಜಿನಿ ಕೊಗಾನ್ ಅಭಿಪ್ರಾಯಪಟ್ಟಿದ್ದಾರೆ.