ರಶ್ಯ: ತನಿಖಾ ಪತ್ರಕರ್ತರ ತಲೆ ಬೋಳಿಸಿ ಚಿತ್ರಹಿಂಸೆ
Photo: Twitter\ @firstpost
ಮಾಸ್ಕೋ: ರಶ್ಯದ ಚೆಚೆನ್ಯಾ ಪ್ರಾಂತದಲ್ಲಿ ಮುಸುಕುಧಾರಿ ವ್ಯಕ್ತಿಗಳು ಪ್ರಮುಖ ತನಿಖಾ ವರದಿಗಾರ ಹಾಗೂ ನ್ಯಾಯವಾದಿಯ ಮೇಲೆ ದಾಳಿ ನಡೆಸಿ ಕ್ರೂರವಾಗಿ ಹಲ್ಲೆ ನಡೆಸಿದ್ದಾರೆ ಎಂದು ವರದಿಯಾಗಿದೆ.
ಚೆಚೆನ್ ಅಧಿಕಾರಿಗಳ ಕಾರ್ಯವೈಖರಿಯನ್ನು ಪ್ರಶ್ನಿಸಿದ್ದಕ್ಕೆ ಬಂಧನದಲ್ಲಿರುವ ಇಬ್ಬರು ಸ್ಥಳೀಯ ಮಾನವಹಕ್ಕು ಕಾರ್ಯಕರ್ತರ ತಾಯಿಯ ವಿಚಾರಣೆಯಲ್ಲಿ ಪಾಲ್ಗೊಳ್ಳಲು ಪತ್ರಕರ್ತೆ ಎಲೆನಾ ಮಿಲಾಷಿನಾ ಮತ್ತು ನ್ಯಾಯವಾದಿ ಅಲೆಕ್ಸಾಂಡರ್ ನೆಮೋವ್ ಚೆಚೆನ್ಯಾಕ್ಕೆ ಆಗಮಿಸಿದ್ದರು.
ವಿಮಾನ ನಿಲ್ದಾಣದ ಹೊರಗಡೆ ಅವರು ಪ್ರಯಾಣಿಸುತ್ತಿದ್ದ ಕಾರನ್ನು ಅಡ್ಡಗಟ್ಟಿದ ಮುಸುಕುಧಾರಿಗಳ ಗುಂಪೊಂದು ದೊಣ್ಣೆಯಿಂದ ಥಳಿಸಿ ಅವರ ತಲೆಗೆ ಪಿಸ್ತೂಲು ಇಟ್ಟು ಬೆದರಿಸಿದೆ ಮತ್ತು ಅವರ ಬಳಿಯಿದ್ದ ವಸ್ತುಗಳನ್ನು ಮುರಿದುಹಾಕಿದೆ. ಹಲ್ಲೆಯಿಂದ ಮಿಲಾಷಿನಾರ ಮೆದುಳಿಗೆ ಏಟುಬಿದ್ದಿದ್ದು ಹಲವು ಬೆರಳುಗಳು ಮುರಿದಿವೆ.
ಪ್ರಜ್ಞೆ ತಪ್ಪಿಬಿದ್ದ ಅವರನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿದೆ. ಚೆಚೆನ್ಯಾದಲ್ಲಿ ಮಾನವಹಕ್ಕುಗಳ ಉಲ್ಲಂಘನೆಯ ಬಗ್ಗೆ ಹಲವು ವರದಿ ಪ್ರಕಟಿಸಿದ್ದ ಮಿಲಾಷಿನಾ ಜೀವಬೆದರಿಕೆ ಎದುರಿಸುತ್ತಿದ್ದರು. ದಾಳಿಯನ್ನು ಖಂಡಿಸಿರುವ ರಶ್ಯ ಅಧ್ಯಕ್ಷರ ವಕ್ತಾರ ಡಿಮಿಟ್ರಿ ಪೆಸ್ಕೋವ್, ಇದೊಂದು ಗಂಭೀರ ಪ್ರಕರಣವಾಗಿದ್ದು ಸೂಕ್ತ ತನಿಖೆ ನಡೆಸುವಂತೆ ಅಧ್ಯಕ್ಷರು ಆದೇಶಿಸಿದ್ದಾರೆ ಎಂದಿದ್ದಾರೆ.
ಮಿಲಾಷಿನಾ ಮತ್ತು ನೆಮೋವ್ ಮೇಲಿನ ಹಲ್ಲೆಯ ಬಗ್ಗೆ ತನಿಖೆ ನಡೆಸುವಂತೆ ರಶ್ಯದ ಮಾನವ ಹಕ್ಕುಗಳ ಸಂಘಟನೆ ಆಗ್ರಹಿಸಿದೆ.