ಉಕ್ರೇನ್ ನಲ್ಲಿ ಪಾಶ್ಚಿಮಾತ್ಯ ಶಾಂತಿಪಾಲಕರ ನಿಯೋಜನೆಗೆ ರಶ್ಯ ವಿರೋಧ
PC : ANI
ಮಾಸ್ಕೋ : ಸುಮಾರು 3 ವರ್ಷದಿಂದ ಮುಂದುವರಿದಿರುವ ಸಂಘರ್ಷವನ್ನು ಕೊನೆಗೊಳಿಸಲು ಯಾವುದೇ ಇತ್ಯರ್ಥದ ಭಾಗವಾಗಿ ಉಕ್ರೇನ್ ನಲ್ಲಿ ಪಾಶ್ಚಿಮಾತ್ಯ ಶಾಂತಿಪಾಲನಾ ಪಡೆಯನ್ನು ನಿಯೋಜಿಸುವುದನ್ನು ರಶ್ಯ ವಿರೋಧಿಸುತ್ತದೆ ಎಂದು ವಿದೇಶಾಂಗ ಸಚಿವ ಸೆರ್ಗೆಯ್ ಲಾವ್ರೋವ್ ಹೇಳಿದ್ದಾರೆ.
ಯಾವುದೇ ಶಾಂತಿ ಒಪ್ಪಂದವನ್ನು ಜಾರಿಗೊಳಿಸಲು ಉಕ್ರೇನ್ ನಲ್ಲಿ ವಿದೇಶಿ ಪಡೆಗಳ ಸಂಭಾವ್ಯ ನಿಯೋಜನೆಯ ಕುರಿತ ಮಾತುಕತೆ ಪಾಶ್ಚಿಮಾತ್ಯ ದೇಶಗಳಲ್ಲಿ ನಡೆಯುತ್ತಿದೆ. ಈ ತಿಂಗಳು ವಾರ್ಸದಲ್ಲಿ ಫ್ರಾನ್ಸ್ ಅಧ್ಯಕ್ಷ ಇಮ್ಯಾನ್ಯುವೆಲ್ ಮ್ಯಾಕ್ರೋನ್ ಹಾಗೂ ಪೋಲ್ಯಾಂಡ್ ಪ್ರಧಾನಿ ಡೊನಾಲ್ಡ್ ಟಸ್ಕ್ ಈ ವಿಷಯದ ಬಗ್ಗೆ ಚರ್ಚೆ ನಡೆಸಿದ್ದರು. ಅಮೆರಿಕದ ಚುನಾಯಿತ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹಾಗೂ ಇತರರು ಪ್ರಸ್ತಾಪಿಸಿರುವ ಯೋಜನೆಯನ್ನು ರಶ್ಯ ವಿರೋಧಿಸುತ್ತದೆ. ಉಕ್ರೇನ್ ಗೆ ಬ್ರಿಟಿಷ್ ಮತ್ತು ಯುರೋಪಿಯನ್ ಪಡೆಗಳ ಶಾಂತಿಪಾಲನಾ ತುಕಡಿಯನ್ನು ಕಳುಹಿಸುವ ಪ್ರಸ್ತಾವನೆಗೆ ನಮ್ಮ ಆಕ್ಷೇಪವಿದೆ ಎಂದು ಲಾವ್ರೋರ್ರನ್ನು ಉಲ್ಲೇಖಿಸಿ ರಶ್ಯದ ಸರ್ಕಾರಿ ಸ್ವಾಮ್ಯದ `ತಾಸ್' ಸುದ್ದಿಸಂಸ್ಥೆ ವರದಿ ಮಾಡಿದೆ. ಉಕ್ರೇನ್ ನಲ್ಲಿ ಶಾಂತಿಪಾಲನಾ ಪಡೆಯ ಬಗ್ಗೆ ಮಾತನಾಡಲು ಇದು ಸಮಯವಲ್ಲ ಎಂದು ರಶ್ಯ ಈ ಹಿಂದೆಯೂ ಹೇಳಿದೆ.
ಉಕ್ರೇನ್ ಗೆ ನೇಟೊ ಸದಸ್ಯತ್ವವನ್ನು ಸುಮಾರು 20 ವರ್ಷಗಳವರೆಗೆ ವಿಳಂಬಿಸುವುದು ಮತ್ತು ಸುಮಾರು 1,000 ಕಿ.ಮೀ ವ್ಯಾಪ್ತಿಯ ಮುಂಚೂಣಿಯಲ್ಲಿ ಯುರೋಪಿಯನ್ ತುಕಡಿಗಳ ನಿಯೋಜನೆಯ ಬಗ್ಗೆ ಟ್ರಂಪ್ ಅವರ ತಂಡದ ಸದಸ್ಯರು ಪ್ರಸ್ತಾಪಿಸಿದ್ದಾರೆ. ಉಕ್ರೇನ್ ನಿಂದ ಸ್ವಾಧೀನಕ್ಕೆ ಪಡೆದಿರುವುದಾಗಿ ರಶ್ಯ ಪ್ರತಿಪಾದಿಸುತ್ತಿರುವ 4 ಪ್ರಾಂತಗಳಾದ ಡೊನೆಟ್ಸ್ಕ್, ಖೆರ್ಸಾನ್, ಲುಗಾಂಸ್ಕ್ ಮತ್ತು ಝಪೋರಿಝಿಯಾದ ಮೇಲಿನ ಹಕ್ಕನ್ನು ಬಿಟ್ಟುಕೊಟ್ಟರೆ ಕದನ ವಿರಾಮ ಒಪ್ಪಂದಕ್ಕೆ ರಶ್ಯ ಸಿದ್ಧ ಎಂದು ರಶ್ಯ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಪಟ್ಟು ಹಿಡಿದಿದ್ದಾರೆ. ಆದರೆ ಇದನ್ನು ಒಪ್ಪಲು ಸಾಧ್ಯವಿಲ್ಲ ಎಂದು ಉಕ್ರೇನ್ ಅಧ್ಯಕ್ಷ ವೊಲೊದಿಮಿರ್ ಝೆಲೆನ್ಸ್ಕಿ ಸ್ಪಷ್ಟಪಡಿಸಿದ್ದಾರೆ.