ಪರಮಾಣು ಯುದ್ಧಕ್ಕೆ ರಶ್ಯ ಸಿದ್ಧ: ಪಾಶ್ಚಿಮಾತ್ಯರಿಗೆ ಪುಟಿನ್ ಎಚ್ಚರಿಕೆ
ವ್ಲಾದಿಮಿರ್ ಪುಟಿನ್ | Photo : PTI
ಮಾಸ್ಕೋ: ಒಂದು ವೇಳೆ ಅಮೆರಿಕವು ಉಕ್ರೇನ್ಗೆ ಸೇನೆ ರವಾನಿಸಿದರೆ ಅದನ್ನು ಯುದ್ಧದ ಗಮನಾರ್ಹ ಉಲ್ಬಣವೆಂದು ಪರಿಗಣಿಸಲಾಗುತ್ತದೆ ಮತ್ತು ಬೆದರಿಕೆ ಎದುರಾದರೆ ರಶ್ಯವು ಪರಮಾಣು ಯುದ್ಧಕ್ಕೆ ತಾಂತ್ರಿಕವಾಗಿ ಸಿದ್ಧವಾಗಿದೆ ಎಂದು ರಶ್ಯ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಪಾಶ್ಚಿಮಾತ್ಯ ದೇಶಗಳಿಗೆ ಬುಧವಾರ ಎಚ್ಚರಿಕೆ ನೀಡಿದ್ದಾರೆ.
ಪರಮಾಣು ಯುದ್ಧದ ಸನ್ನಿವೇಶ ಈಗ ಎದುರಾಗಿಲ್ಲ ಮತ್ತು ಉಕ್ರೇನ್ನಲ್ಲಿ ಪರಮಾಣು ಅಸ್ತ್ರಗಳನ್ನು ಬಳಸುವ ಅಗತ್ಯ ಕಂಡು ಬಂದಿಲ್ಲ ಎಂದು ಪುಟಿನ್ ಹೇಳಿದ್ದಾರೆ. ಮಾರ್ಚ್ 15ರಿಂದ 17ರವರೆಗೆ ನಡೆಯಲಿರುವ ಅಧ್ಯಕ್ಷೀಯ ಚುನಾವಣೆಯಲ್ಲಿ ಪುಟಿನ್ ಗೆಲುವು ಬಹುತೇಕ ನಿಶ್ಚಿತವಾಗಿದೆ.
ರಶ್ಯವು ಪರಮಾಣು ಯುದ್ಧಕ್ಕೆ ನಿಜವಾಗಿಯೂ ಸಿದ್ಧವಿದೆಯೇ ಎಂಬ ಮಾಧ್ಯಮದರ ಪ್ರಶ್ನೆಗೆ ಪುಟಿನ್ `ಮಿಲಿಟರಿ ತಾಂತ್ರಿಕ ದೃಷ್ಟಿಕೋನದಿಂದ ಹೇಳುವುದಾದರೆ ಖಂಡಿತಾ ನಾವು ಸಿದ್ಧವಿದ್ದೇವೆ' ಎಂದು ಉತ್ತರಿಸಿರುವುದಾಗಿ `ರೊಸಿಯಾ-1' ಟಿವಿ ವಾಹಿನಿ ವರದಿ ಮಾಡಿದೆ. `ರಶ್ಯನ್ ಪ್ರದೇಶದಲ್ಲಿ ಸೇನೆಯನ್ನು ನಿಯೋಜಿಸಿದರೆ ಅಥವಾ ಉಕ್ರೇನ್ಗೆ ಸೇನೆಯನ್ನು ರವಾನಿಸಿದರೆ ಈ ಕ್ರಮವನ್ನು ರಶ್ಯವು ಹಸ್ತಕ್ಷೇಪವೆಂದು ಪರಿಗಣಿಸುತ್ತದೆ ಎಂಬುದು ಅಮೆರಿಕಕ್ಕೆ ತಿಳಿದಿದೆ. ರಶ್ಯ-ಅಮೆರಿಕ ಸಂಬಂಧದ ಕ್ಷೇತ್ರದಲ್ಲಿ ಮತ್ತು ಕಾರ್ಯತಂತ್ರದ ಸಂಯಮದ ಕ್ಷೇತ್ರದಲ್ಲಿ ಸಾಕಷ್ಟು ಪರಿಣತರು ಅಮೆರಿಕದಲ್ಲಿ ಇದ್ದಾರೆ. ಆದ್ದರಿಂದ ಪರಮಾಣು ಮುಖಾಮುಖಿ ಸಂಭವಿಸುತ್ತದೆ ಎಂದು ನನಗನಿಸುವುದಿಲ್ಲ. ಆದರೆ ನಾವಂತೂ ಅದಕ್ಕೆ ಸಿದ್ಧವಾಗಿದ್ದೇವೆ' ಎಂದರು.
`ಆಯುಧಗಳಿರುವುದು ಬಳಸಲಿಕ್ಕೆ. ಆದರೆ ನಮಗೆ ನಮ್ಮದೇ ಆದ ತತ್ವಗಳಿವೆ. ನಮ್ಮ ಪರಮಾಣು ನೀತಿಯಲ್ಲಿ ಈ ಬಗ್ಗೆ ಸ್ಪಷ್ಟನೆಯಿದೆ. ಯಾವ ಸಂದರ್ಭದಲ್ಲಿ ಪರಮಾಣು ಅಸ್ತ್ರಗಳನ್ನು ಬಳಸಬಹುದು ಎಂಬ ಬಗ್ಗೆ ನಮ್ಮ ನೀತಿಯಲ್ಲಿ ವಿವರವಿದೆ. ಅಮೆರಿಕ ಪರಮಾಣು ಪರೀಕ್ಷೆ ನಡೆಸಿದರೆ ನಾವೂ ನಡೆಸುತ್ತೇವೆ' ಎಂದು ಪುಟಿನ್ ಹೇಳಿದ್ದಾರೆ. ಉಕ್ರೇನ್ ಕುರಿತ ಶಾಂತಿ ಮಾತುಕತೆಗೆ ರಶ್ಯ ಸಿದ್ಧವಿದೆ. ಆದರೆ ವಾಸ್ತವ ಅಂಶಗಳನ್ನು ಆಧರಿಸಿ ಮಾತುಕತೆ ನಡೆಯಬೇಕು. ಊಹೆ ಅಥವಾ ಕಲ್ಪನೆಯನ್ನು ಆಧರಿಸಿ ಅಲ್ಲ' ಎಂದವರು ಇದೇ ಸಂದರ್ಭ ಹೇಳಿದ್ದಾರೆ.
ಜಗತ್ತಿನಲ್ಲಿರುವ ಪರಮಾಣು ಶಸ್ತ್ರಾಸ್ತ್ರಗಳ 90%ಕ್ಕೂ ಅಧಿಕ ಪ್ರಮಾಣವನ್ನು ರಶ್ಯ ಮತ್ತು ಅಮೆರಿಕ ಹೊಂದಿದೆ. ಪರಮಾಣು ದಾಳಿ ನಡೆಸುವ ಬಗ್ಗೆ ರಶ್ಯದ ಉನ್ನತ ಅಧಿಕಾರಿಗಳ ನಡುವೆ 2022ರಲ್ಲಿ ಚರ್ಚೆ ನಡೆದಿತ್ತು ಎಂದು ಅಮೆರಿಕದ ಗುಪ್ತಚರ ಇಲಾಖೆ ಹೇಳಿದೆ.