ಪರಮಾಣು ನೀತಿಯನ್ನು ಪರಿಷ್ಕರಿಸಿದ ರಶ್ಯ | ನೇಟೊ , ಉಕ್ರೇನ್ ವಿರುದ್ಧದ ಪರಮಾಣು ದಾಳಿ ಮಿತಿ ಪರಿಷ್ಕರಣೆ
ಮನೆಯಲ್ಲಿ ಆಹಾರ, ಔಷಧ ಸಂಗ್ರಹಿಸಿಡಿ : ನಾಗರಿಕರಿಗೆ ಸ್ವೀಡನ್, ಫಿನ್ಲ್ಯಾಂಡ್ ಎಚ್ಚರಿಕೆ
ಸಾಂದರ್ಭಿಕ ಚಿತ್ರ
ಮಾಸ್ಕೋ : ರಶ್ಯ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಮಂಗಳವಾರ ಪರಿಷ್ಕೃತ ರಾಷ್ಟ್ರೀಯ ಪರಮಾಣು ನೀತಿಗೆ ಸಹಿ ಹಾಕಿದ್ದಾರೆ. ಪರಿಷ್ಕೃತ ನೀತಿಯು ರಶ್ಯವು ಪರಮಾಣು ಶಸ್ತ್ರಾಸ್ತ್ರಗಳನ್ನು ಬಳಸಬಹುದಾದ ಪರಿಸ್ಥಿತಿಗಳನ್ನು ವಿಸ್ತರಿಸಿದೆ. ಉಕ್ರೇನ್ ಗೆ ಸಹಾಯ ಮಾಡಿದ್ದಕ್ಕಾಗಿ ನೇಟೊ ಸದಸ್ಯರ ವಿರುದ್ಧದ ಪ್ರತೀಕಾರ ಕ್ರಮವನ್ನು ಸುಲಭವಾಗಿ ಸಮರ್ಥಿಸಿಕೊಳ್ಳಲು ಸಾಧ್ಯವಾಗಲಿದೆ.
ಪರಮಾಣು ಶಕ್ತ ದೇಶದ ಬೆಂಬಲ ಪಡೆದ ಪರಮಾಣು ಅಸ್ತ್ರ ರಹಿತ ದೇಶದ ದಾಳಿಯನ್ನು ಜಂಟಿ ದಾಳಿ ಎಂದು ಈಗ ರಶ್ಯ ಪರಿಗಣಿಸಬಹುದಾಗಿದೆ. ತನ್ನ ಸಾರ್ವಭೌಮತೆಗೆ ಧಕ್ಕೆ ತರುವ ಸಾಂಪ್ರದಾಯಿಕ ಶಸ್ತ್ರಾಸ್ತ್ರಗಳ ದಾಳಿಗೆ ಪರಮಾಣು ಶಸ್ತ್ರಾಸ್ತ್ರಗಳಿಂದ ಪ್ರತೀಕಾರ ತೀರಿಸಿಕೊಳ್ಳಲು ಈಗ ವಿಶ್ವದಲ್ಲಿ ಅತ್ಯಧಿಕ ಪರಮಾಣು ಶಸ್ತ್ರಾಸ್ತ್ರ ಹೊಂದಿರುವ ರಶ್ಯಕ್ಕೆ ಅವಕಾಶ ದೊರಕಿದೆ.
`ನಮ್ಮ ದೇಶದ ವಿರುದ್ಧ ಪ್ರಯೋಗಿಸಲಾದ ನೇಟೊ ಕ್ಷಿಪಣಿಗಳು ನೇಟೊ ಬಣದಿಂದ ರಶ್ಯದ ಮೇಲೆ ನಡೆದ ದಾಳಿಯೆಂದು ಪರಿಗಣಿಸಲಾಗುವುದು. ಇದಕ್ಕೆ ಪ್ರತಿಯಾಗಿ ಉಕ್ರೇನ್ ಮತ್ತು ನೇಟೊದ ಪ್ರಮುಖ ವ್ಯವಸ್ಥೆಗಳ ವಿರುದ್ಧ ಸಾಮೂಹಿಕ ವಿನಾಶದ ಆಯುಧಗಳನ್ನು (ಡಬ್ಲ್ಯೂಎಂಡಿ) ಬಳಸಬಹುದು. ಇದರರ್ಥ ಮೂರನೇ ವಿಶ್ವಯುದ್ಧ' ಎಂದು ರಶ್ಯದ ಮಾಜಿ ಅಧ್ಯಕ್ಷ ಮತ್ತು ರಶ್ಯದ ಭದ್ರತಾ ಮಂಡಳಿಯ ಉಪಾಧ್ಯಕ್ಷ ಡಿಮಿಟ್ರಿ ಮೆಡ್ವಡೇವ್ `ಎಕ್ಸ್'ನಲ್ಲಿ ಪೋಸ್ಟ್ ಮಾಡಿದ್ದಾರೆ.
ಪರಿಷ್ಕರಿಸಿದ ನೀತಿಯು ಪರಮಾಣು ಅಸ್ತ್ರಗಳು ಸಂಘರ್ಘ ಉಲ್ಬಣವನ್ನು `ತಡೆಯುವ ಸಾಧನ' ಎಂದು ಬಣ್ಣಿಸಿದ್ದು ಗಂಭೀರ ಮತ್ತು ಅನಿವಾರ್ಯ ಪರಿಸ್ಥಿತಿಯಲ್ಲಿ ಇದನ್ನು ಬಳಸಲಾಗುತ್ತದೆ ಎಂದಿದೆ. ಪರಮಾಣು ಬೆದರಿಕೆಯನ್ನು ಕಡಿಮೆಗೊಳಿಸಲು, ಪರಮಾಣು ಸೇರಿದಂತೆ ಮಿಲಿಟರಿ ಘರ್ಷಣೆಯನ್ನು ಪ್ರಚೋದಿಸುವ ಅಂತರ್-ರಾಷ್ಟ್ರ ಸಂಬಂಧಗಳ ಉಲ್ಬಣವನ್ನು ತಡೆಯಲು ರಶ್ಯವು ಎಲ್ಲಾ ಅಗತ್ಯ ಪ್ರಯತ್ನಗಳನ್ನು ಕೈಗೊಂಡಿದೆ. ರಶ್ಯ ಅಥವಾ ಅದರ ಮಿತ್ರರ ವಿರುದ್ಧ ಪರಮಾಣು ಮತ್ತು ಇತರ ರೀತಿಯ ಸಾಮೂಹಿಕ ವಿನಾಶದ ಅಸ್ತ್ರಗಳನ್ನು ಬಳಸಿದ್ದಕ್ಕೆ ಪ್ರತಿಯಾಗಿ, ಅಥವಾ ರಶ್ಯ ಮತ್ತು ಬೆಲಾರಸ್ನ ಸಾರ್ವಭೌಮತೆ ಮತ್ತು ಪ್ರಾದೇಶಿಕ ಸಮಗ್ರತೆಗೆ ಬೆದರಿಕೆ ಒಡ್ಡುವ ರೀತಿ ಸಾಂಪ್ರದಾಯಿಕ ಅಸ್ತ್ರಗಳಿಂದ ದಾಳಿ ನಡೆದಾಗ ರಶ್ಯ ಪರಮಾಣು ಅಸ್ತ್ರಗಳನ್ನು ಬಳಸಬಹುದು ಎಂದು ಪರಿಷ್ಕೃತ ನೀತಿಯಲ್ಲಿ ಉಲ್ಲೇಖಿಸಲಾಗಿದೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಅಮೆರಿಕ, ತನ್ನ ಪರಮಾಣು ನೀತಿಯಲ್ಲಿ ಬದಲಾವಣೆ ಮಾಡುವುದಿಲ್ಲ ಎಂದು ಸ್ಪಷ್ಟಪಡಿಸಿದೆ. `ಈ ತಿಂಗಳ ಆರಂಭದಲ್ಲಿ ನಾವು ಹೇಳಿರುವಂತೆ, ರಶ್ಯದ ಘೋಷಣೆಯಿಂದ ನಮಗೆ ಆಶ್ಚರ್ಯವಾಗಿಲ್ಲ. ತನ್ನ ಪರಮಾಣು ನೀತಿಯಲ್ಲಿ ಪರಿಷ್ಕರಣೆಯ ಬಗ್ಗೆ ಹಲವು ವಾರಗಳಿಂದ ರಶ್ಯ ಸೂಚನೆ ನೀಡುತ್ತಿತ್ತು' ಎಂದು ಶ್ವೇತಭವನದ ರಾಷ್ಟ್ರೀಯ ಭದ್ರತಾ ಮಂಡಳಿಯನ್ನು ಉಲ್ಲೇಖಿಸಿ `ರಾಯ್ಟರ್ಸ್' ವರದಿ ಮಾಡಿದೆ.
ಉಕ್ರೇನ್ ಅಮೆರಿಕ ನಿರ್ಮಿತ ಎಟಿಎಸಿಎಂಎಸ್ ಕ್ಷಿಪಣಿಗಳನ್ನು ರಶ್ಯದ ಬ್ರಯಾಂಸ್ಕ್ ಪ್ರಾಂತದ ಮೇಲೆ ಪ್ರಯೋಗಿಸಿದೆ ಎಂದು ಮಂಗಳವಾರ ರಶ್ಯದ ರಕ್ಷಣಾ ಸಚಿವಾಲಯ ಹೇಳಿದ್ದು ಇದನ್ನು ಅಮೆರಿಕ ಮತ್ತು ಉಕ್ರೇನ್ನ ಹಿರಿಯ ಅಧಿಕಾರಿಗಳು ದೃಢಪಡಿಸಿದ್ದಾರೆ.
►ಪರಮಾಣು ರಕ್ಷಣಾ ಟೆಂಟ್ಗಳ ನಿರ್ಮಾಣ
ಈ ಮಧ್ಯೆ, ರಶ್ಯವು ಚರ (ಸ್ಥಳಾಂತರಿಸಬಹುದಾದ) ಪರಮಾಣು ರಕ್ಷಣಾ ಟೆಂಟ್ಗಳನ್ನು ಬೃಹತ್ ಪ್ರಮಾಣದಲ್ಲಿ ಉತ್ಪಾದಿಸುವ ಕಾರ್ಯಕ್ಕೆ ಮಂಗಳವಾರ ಚಾಲನೆ ನೀಡಿದೆ.
ಈ ಟೆಂಟ್ಗಳು ಜನರನ್ನು ಪರಮಾಣು ಸ್ಫೋಟ ಅಥವಾ ವಿಕಿರಣಶೀಲ ಮಾಲಿನ್ಯದಿಂದ ಜನರನ್ನು ರಕ್ಷಿಸಲು ಬಳಕೆಯಾಗಲಿದೆ ಎಂದು ರಶ್ಯದ ಸರಕಾರಿ ಸ್ವಾಮ್ಯದ ರಿಯಾ ನೊವೊಸ್ತಿ ಸುದ್ದಿಸಂಸ್ಥೆ ವರದಿ ಮಾಡಿದೆ.
ಮನೆಯಲ್ಲಿ ಆಹಾರ, ಔಷಧ ಸಂಗ್ರಹಿಸಿಡಿ : ನಾಗರಿಕರಿಗೆ ಸ್ವೀಡನ್, ಫಿನ್ಲ್ಯಾಂಡ್ ಎಚ್ಚರಿಕೆ
ಉಕ್ರೇನ್-ರಶ್ಯ ಸಂಘರ್ಷ ಪರಮಾಣು ಯುದ್ಧದ ಸ್ವರೂಪ ಪಡೆಯುವ ಅಪಾಯದ ಹಿನ್ನೆಲೆಯಲ್ಲಿ ನೇಟೊ ಮಿತ್ರದೇಶಗಳು ರಕ್ಷಣಾ ಕ್ರಮಗಳನ್ನು ಬಿಗಿಗೊಳಿಸಿದ್ದು ಯುದ್ಧ ಸಂಭವಿಸಿದರೆ ಅನುಸರಿಸಬೇಕಾದ ಕ್ರಮಗಳ ಬಗ್ಗೆ ನಾಗರಿಕರಿಗೆ ಮಾರ್ಗಸೂಚಿಗಳನ್ನು ಬಿಡುಗಡೆಗೊಳಿಸಿದೆ.
ಬಾಟಲಿಗಳ ನೀರನ್ನು, ನೈರ್ಮಲ್ಯ ಉತ್ಪಾದನೆಗಳನ್ನು , ಖಾದ್ಯ ಆಹಾರ ವಸ್ತುಗಳನ್ನು ಮನೆಯಲ್ಲಿ ಸಾಕಷ್ಟು ಪ್ರಮಾಣದಲ್ಲಿ ಸಂಗ್ರಹಿಸಿಡಬೇಕು, ಡಯಾಪರ್ ಗಳು, ಔಷಧಗಳು ಹಾಗೂ ಶಿಶುಗಳ ಆಹಾರವನ್ನು ಸಂಗ್ರಹಿಸುವಂತೆ, ಮಿಲಿಟರಿ ಸಂಘರ್ಷ, ಸಂವಹನ ಮತ್ತು ವಿದ್ಯುತ್ ಕಡಿತದಂತಹ ಸಂದರ್ಭದಲ್ಲಿ ಕೈಗೊಳ್ಳಬೇಕಾದ ಸಿದ್ಧತೆಗಳನ್ನು ಸೂಚಿಸುವ ಕೈಪಿಡಿಯನ್ನು ನಾರ್ಡಿಕ್ ದೇಶಗಳು (ಯುರೋಪ್ನ ಉತ್ತರ ವಲಯದಲ್ಲಿ ನೆಲೆಗೊಂಡಿರುವ ಸಾರ್ವಭೌಮ ರಾಷ್ಟ್ರಗಳ ಗುಂಪು) ಕೋಟ್ಯಾಂತರ ಕುಟುಂಬಗಳಿಗೆ ತಲುಪಿಸಿವೆ.
ರಕ್ತಸ್ರಾವವನ್ನು ಹೇಗೆ ನಿಲ್ಲಿಸುವುದು, ಆತಂಕವನ್ನು ಹೇಗೆ ಎದುರಿಸುವುದು, ಸಾಕುಪ್ರಾಣಿಗಳನ್ನು ಹೇಗೆ ರಕ್ಷಿಸುವುದು, ಮಕ್ಕಳಿಗೆ ಸಂಘರ್ಷದ ಭೀಕರತೆಯ ಬಗ್ಗೆ ಯಾವ ರೀತಿ ವಿವರಿಸಬೇಕು ಮುಂತಾದ ಸಲಹೆಗಳನ್ನು ನೀಡಲಾಗಿದೆ.