ಉಕ್ರೇನ್ ನಿಂದ 62 ಡ್ರೋನ್ ದಾಳಿ | ತೈಲ ಸಂಸ್ಕರಣಾಗಾರ ಸ್ಥಗಿತ: ರಶ್ಯ
ಸಾಂದರ್ಭಿಕ ಚಿತ್ರ \ Photo: PTI
ಮಾಸ್ಕೋ: ಉಕ್ರೇನ್ನಿಂದ 62 ಡ್ರೋನ್ ದಾಳಿ ನಡೆದ ಬಳಿಕ ದಕ್ಷಿಣ ರಶ್ಯದ ತೈಲ ಸಂಸ್ಕರಣಾಗಾರವನ್ನು ಸ್ಥಗಿತಗೊಳಿಸಲಾಗಿದೆ. ರಶ್ಯದ ನಿಯಂತ್ರಣದ ಪ್ರದೇಶದ ಮೇಲೆ ಉಕ್ರೇನ್ನ ಪಡೆಗಳು ಅಮೆರಿಕ ಮತ್ತು ಫ್ರಾನ್ಸ್ ನಿರ್ಮಿತ ಕ್ಷಿಪಣಿಗಳನ್ನು ಪ್ರಯೋಗಿಸಿವೆ ಎಂದು ರಶ್ಯ ಹೇಳಿದೆ.
ಕ್ರಿಮಿಯಾ ಪ್ರಾಂತದ ಮೇಲೆ ಹಾರಿಸಲಾದ 62 ಡ್ರೋನ್ ಸೇರಿದಂತೆ ಕನಿಷ್ಟ 103 ಡ್ರೋನ್ ಗಳನ್ನು ಹೊಡೆದುರುಳಿಸಲಾಗಿದೆ. ಅಮೆರಿಕ ನಿರ್ಮಿತ `ಹೈ ಮೊಬಿಲಿಟಿ ಆರ್ಟಿಲರಿ ರಾಕೆಟ್ ಸಿಸ್ಟಮ್' ಹಾಗೂ ಫ್ರಾನ್ಸ್ ನಿರ್ಮಿತ ಹ್ಯಾಮರ್ ಬಾಂಬ್ ಗಳನ್ನು ಉಕ್ರೇನ್ ಪ್ರಯೋಗಿಸಿದೆ ಎಂದು ರಶ್ಯ ಸೇನೆ ಹೇಳಿದೆ.
ಸುಮಾರು 6 ಡ್ರೋನ್ ಗಳು ದಕ್ಷಿಣದ ಕ್ರಸ್ನೊಡಾರ್ ವಲಯದ ಸ್ಲವ್ಯಾಂಸ್ಕ್ ನಗರದಲ್ಲಿನ ತೈಲ ಸಂಸ್ಕರಣಾಗಾರಕ್ಕೆ ಅಪ್ಪಳಿಸಿದೆ. ಬಳಿಕ ತೈಲ ಸಂಸ್ಕರಣಾಗಾರದ ಕಾರ್ಯವನ್ನು ಸ್ಥಗಿತಗೊಳಿಸಲಾಗಿದೆ ಎಂದು ಸ್ಥಳೀಯ ಅಧಿಕಾರಿಗಳನ್ನು ಉಲ್ಲೇಖಿಸಿ `ತಾಸ್' ಸುದ್ಧಿಸಂಸ್ಥೆ ವರದಿ ಮಾಡಿದೆ. ಸ್ಲವ್ಯಾಂಸ್ಕ್ ತೈಲ ಸಂಸ್ಕರಣಾಗಾರಕ್ಕೆ ದಾಳಿ ನಡೆಸಿರುವುದನ್ನು ಉಕ್ರೇನ್ ನ ಗುಪ್ತಚರ ಮೂಲಗಳು ದೃಢಪಡಿಸಿದ್ದು ಕಪ್ಪು ಸಮುದ್ರದ ಬಳಿ ರಶ್ಯ ಸೇನೆ ನಿಯೋಜಿಸಿದ್ದ ನೆಲಬಾಂಬ್ ನಾಶಕ ವ್ಯವಸ್ಥೆಯನ್ನು ಧ್ವಂಸಗೊಳಿಸಲಾಗಿದೆ ಎಂದಿದೆ. ಈ ಮಧ್ಯೆ, ಖಾರ್ಕಿವ್ ವಲಯದ ಸ್ಟರಿಟ್ಸಿಯಾ ಗ್ರಾಮವನ್ನು ರಶ್ಯದ ಸೇನೆ ವಶಕ್ಕೆ ಪಡೆದಿರುವುದಾಗಿ ವರದಿಯಾಗಿದೆ.