ಇಂಧನ ಸ್ಥಾವರಗಳ ಮೇಲಿನ ದಾಳಿ ನಿಲ್ಲಿಸುವ ಬಗ್ಗೆ ರಶ್ಯ, ಉಕ್ರೇನ್ ಮಾತುಕತೆ
ಸಾಂದರ್ಭಿಕ ಚಿತ್ರ
ಮಾಸ್ಕೋ : ಪರಸ್ಪರರ ಇಂಧನ ಸೌಲಭ್ಯಗಳ ಮೇಲೆ ವೈಮಾನಿಕ ದಾಳಿಯನ್ನು ನಿಲ್ಲಿಸುವ ಬಗ್ಗೆ ರಶ್ಯ ಮತ್ತು ಉಕ್ರೇನ್ ಅಧಿಕಾರಿಗಳು ಮಾತುಕತೆ ನಡೆಸುತ್ತಿದ್ದಾರೆ ಎಂದು ಉನ್ನತ ಮೂಲಗಳನ್ನು ಉಲ್ಲೇಖಿಸಿ `ದಿ ಫೈನಾನ್ಶಿಯಲ್ ಟೈಮ್ಸ್' ವರದಿ ಮಾಡಿದೆ.
ಈ ವಿಷಯದ ಬಗ್ಗೆ ಈ ಹಿಂದೆ ಖತರ್ ಮಧ್ಯಸ್ಥಿಕೆಯಲ್ಲಿ ಸಹಿ ಹಾಕಲಾಗಿದ್ದ ಒಪ್ಪಂದ ಆಗಸ್ಟ್ನಲ್ಲಿ ಅಂತ್ಯಗೊಂಡಿತ್ತು. ಬಳಿಕ ಒಪ್ಪಂದ ಮುಂದುವರಿಸುವ ಬಗ್ಗೆ ಮಾತುಕತೆ ಆರಂಭಿಸಲು ಉಕ್ರೇನ್ ಆಸಕ್ತಿ ತೋರಿತ್ತು. ಆದರೆ ಆಗಸ್ಟ್ನಲ್ಲಿ ರಶ್ಯದ ಕಸ್ರ್ಕ್ ನಗರದೊಳಗೆ ಉಕ್ರೇನ್ ಪಡೆ ನುಗ್ಗಿದ ನಂತರ ಮಾತುಕತೆ ಹಳಿತಪ್ಪಿತ್ತು. ಇದೀಗ ಮಾತುಕತೆ ಆರಂಭಿಕ ಹಂತದಲ್ಲಿದ್ದು ಗಮನಾರ್ಹ ಪ್ರಗತಿ ಸಾಧಿಸಲಾಗಿಲ್ಲ ಎಂದು ವರದಿ ಹೇಳಿದೆ.
2022ರಲ್ಲಿ ಉಕ್ರೇನ್ ಮೇಲೆ ರಶ್ಯದ ಪೂರ್ಣಪ್ರಮಾಣದ ಆಕ್ರಮಣ ಆರಂಭಗೊಂಡ ಬಳಿಕ ಉಕ್ರೇನ್ ನ ಬಹುತೇಕ ಇಂಧನ ಸಾಮರ್ಥ್ಯವನ್ನು ರಶ್ಯ ನಾಶಗೊಳಿಸಿದೆ. ಇದೀಗ ವಿದ್ಯುತ್ ಮತ್ತಿತರ ವ್ಯವಸ್ಥೆಗಾಗಿ ತನ್ನ ಪರಮಾಣು ವ್ಯವಸ್ಥೆಯನ್ನು ಉಕ್ರೇನ್ ಅವಲಂಬಿಸಿದೆ. ಜತೆಗೆ ಯುರೋಪ್ನಿಂದ ಆಮದು ಮಾಡಿಕೊಳ್ಳುತ್ತಿದೆ. ಉಕ್ರೇನ್ ನ 50%ಕ್ಕೂ ಅಧಿಕ ಇಂಧನ ಮೂಲಸೌಕರ್ಯಗಳು ರಶ್ಯದ ದಾಳಿಯಲ್ಲಿ ಹಾನಿಗೊಂಡಿರುವುದಾಗಿ ಯುರೋಪಿಯನ್ ಕಮಿಷನ್ ಅಧ್ಯಕ್ಷೆ ಉರ್ಸುಲಾ ವಾನ್ಡರ್ ಲಿಯೆನ್ ಕಳೆದ ತಿಂಗಳು ಹೇಳಿದ್ದರು.