ರಷ್ಯಾ| ಮಾಸ್ಕೋದತ್ತ ತೆರಳದಂತೆ ತನ್ನ ಸೈನಿಕರಿಗೆ ಆದೇಶಿಸಿದ ವ್ಯಾಗ್ನರ್ ಮುಖ್ಯಸ್ಥ
Photo: NDTV.com
ಮಾಸ್ಕೊ: ರಷ್ಯಾದಲ್ಲಿ ವಾಗ್ನರ್ ಗ್ರೂಪ್ ನಡೆಸಿದ ಕ್ಷಿಪ್ರಕ್ರಾಂತಿಯ ಕಾರಣದಿಂದ ರಾಜಧಾನಿಯಲ್ಲಿ ಜುಲೈ 1ರ ವರೆಗೆ ಎಲ್ಲ ಹೊರಾಂಗಣ ಸಭೆ ಸಮಾರಂಭಗಳನ್ನು ನಿಷೇಧಿಸಲಾಗಿದೆ. ಅಂತೆಯೇ ಸೋಮವಾರವನ್ನು ಕೆಲಸ ರಹಿತ ದಿನವನ್ನಾಗಿ ಘೋಷಿಸಲಾಗಿದೆ.
ಯೆವ್ಗೆನಿ ಪ್ರಿಜೊಝಿನ್ ನೇತೃತ್ವದ ಅರೆಮಿಲಿಟರಿ ಪಡೆಯ ಮುನ್ನಡೆ ಹಿನ್ನೆಲೆಯಲ್ಲಿ ಶನಿವಾರ ಸಂಜೆ ಈ ನಿರ್ಧಾರ ಪ್ರಕಟಿಸಲಾಗಿದೆ. ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಅವರನ್ನು ಪದಚ್ಯುತಗೊಳಿಸಿ, ಮಿಲಿಟರಿ ನಾಯಕತ್ವವನ್ನು ಬದಲಿಸುವ ಉದ್ದೇಶದಿಂದ ವಾಗ್ನರ್ ಗ್ರೂಪ್ ಕ್ಷಿಪ್ರಕ್ರಾಂತಿ ನಡೆಸಿದೆ.
ಏತನ್ಮಧ್ಯೆ ರಕ್ತಪಾತ ತಡೆಯುವ ಸಲುವಾಗಿ ಮಾಸ್ಕೊದತ್ತ ಜಾಥಾವನ್ನು ಸದ್ಯಕ್ಕೆ ಸ್ಥಗಿತಗೊಳಿಸುವಂತೆ ಎಲ್ಲ ಸೈನಿಕರಿಗೆ ಸೂಚನೆ ನೀಡಲಾಗಿದೆ. ಜತೆಗೆ ಎಲ್ಲ ಸೈನಿಕರು ಉಕ್ರೇನ್ನಲ್ಲಿರುವ ತಮ್ಮ ಶಿಬಿರಗಳಿಗೆ ಮರಳುವಂತೆ ಸೂಚಿಸಲಾಗಿದೆ ಎಂದು ಪ್ರಿಗೊಝಿನ್ ಪ್ರಕಟಿಸಿದ್ದಾರೆ. ಅಂದರೆ ಸಂಘರ್ಷವನ್ನು ಶಮನಗೊಳಿಸಲು ಯೆವ್ಗೆನಿ ಮುಂದಾಗಿದ್ದಾರೆ ಎನ್ನುವುದರ ಸೂಚನೆ ಇದಾಗಿದೆ.
ಬಂಡುಕೋರರ ನೇತೃತ್ವದ ಖಾಸಗಿ ಸೇನೆಯನ್ನು ಎದುರಿಸಲಿ ರಷ್ಯಾ ಸಜ್ಜಾಗಿದ್ದು, ಯಾವುದೇ ಘೋರ ಪರಿಣಾಮವನ್ನು ಎದುರಿಸಲು ಸಿದ್ಧ ಎಂದು ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಅವರು ಘೋಷಿಸಿದ್ದಾರೆ.
ತಮ್ಮ ಪಡೆಗಳ ಮೇಲೆ ರಷ್ಯಾದ ರಕ್ಷಣಾ ಸಚಿವಾಲಯ ಕ್ಷಿಪಣಿ ದಾಳಿಯನ್ನು ನಡೆಸಿದೆ ಎಂದು ಆಪಾದಿಸಿ ವಾಗ್ನರ್ ಗ್ರೂಪ್ ಮುಖ್ಯಸ್ಥ ಈ ದಾಳಿಗೆ ಮುಂದಾಗಿದ್ದರು. ವಾಗ್ನರ್ ಗ್ರೂಪ್ ನೇತೃತ್ವದಲ್ಲೇ ಉಕ್ರೇನ್ ದಾಳಿ ನಡೆದಿದ್ದು, ವಾಗ್ನರ್ ಯೋಧರ ಸಾವಿನ ಬಳಿಕ ರಷ್ಯಾ ಅಧ್ಯಕ್ಷರ ವಿರುದ್ಧ ಆಕ್ರೋಶ ಸ್ಫೋಟಗೊಂಡಿದೆ. ಜತೆಗೆ ಜುಲೈ 1ರ ನಡುವೆ ಮಿಲಿಟರಿ ಗುತ್ತಿಗೆದಾರರು ಗುತ್ತಿಗೆಗೆ ಸಹಿ ಮಾಡುವಂತೆ ರಕ್ಷಣಾ ಸಚಿವಾಲಯ ಆಗ್ರಹಿಸಿದ ಹಿನ್ನೆಲೆಯಲ್ಲಿ ಸಂಘರ್ಷ ಬಿಗಡಾಯಿಸಿದೆ.